ಧಾರವಾಡ: ಹೆಬ್ಬಳ್ಳಿಯಲ್ಲಿ 1.38 ಕೋಟಿ ಮೌಲ್ಯದ ಪೈಪ್‌ಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಧಾರವಾಡ: ಹೆಬ್ಬಳ್ಳಿಯಲ್ಲಿ 1.38 ಕೋಟಿ ಮೌಲ್ಯದ ಪೈಪ್‌ಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಜಲ ಜೀವನ್ ಮಿಷನ್ ಯೋಜನೆಯಡಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ತಂದಿಡಲಾಗಿದ್ದ ಅಂದಾಜು 1 ಕೋಟಿ 38 ಲಕ್ಷ ರೂಪಾಯಿ ಮೌಲ್ಯದ ಪೈಪ್‌ಗಳಿಗೆ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಗ್ರಾಮ ಪಂಚಾಯ್ತಿ ಹಿಂಭಾಗದಲ್ಲೇ ಈ ಪೈಪ್‌ಗಳನ್ನು ತಂದಿಡಲಾಗಿತ್ತು. ಮೊನ್ನೆಯಷ್ಟೇ ಈ ಪೈಪ್‌ಲೈನ್‌ಗಳನ್ನು ಅಳವಡಿಸುವ ಕುರಿತು ಅಧಿಕಾರಿಗಳು ಪರಿಶೀಲನೆ ಕೂಡ ಮಾಡಿ ಹೋಗಿದ್ದರು. ಆದರೆ, ನಿನ್ನೆ ತಡರಾತ್ರಿ ಇಡೀ ಪೈಪ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ಇದರಿಂದ ಪೈಪ್‌ಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯ ಕೆನ್ನಾಲಿಗೆ ಅಲ್ಲೇ ಇದ್ದ ತ್ಯಾಜ್ಯ ವಿಲೇವಾರಿ ಘಟಕಕ್ಕೂ ಚಾಚಿತ್ತು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಇಂದು ಬೆಳಿಗ್ಗೆ ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಸಿಇಓ ಸುರೇಶ ಇಟ್ನಾಳ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು