ಜೂನ್ 2ರಂದು ಕಾಂಗ್ರೆಸ್ ಶಾಸಕಾಂಗ ಸಭೆ

ಜೂನ್ 2ರಂದು ಕಾಂಗ್ರೆಸ್ ಶಾಸಕಾಂಗ ಸಭೆ

ಬೆಂಗಳೂರು: ಜೂನ್ 2 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. 

ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲೆಂದು ದೆಹಲಿ ಹೈಕಮಾಂಡ್ ಭೇಟಿ ಮಾಡಿ ರಾಜ್ಯಕ್ಕೆ ಮರಳಿದ ಬಳಿಕ ಗುರುವಾರದಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಭಾನುವಾರ ಸಿಎಲ್‌ಪಿ ಸಭೆ ನಿಗದಿಯಾಗಿದೆ ಎಂದರು. 

ಲೋಕಸಭೆ ಚುನಾವಣೆ ಫಲಿತಾಂಶ, ವಿಧಾನಪರಿಷತ್, ಶಿಕ್ಷಕರ, ಪದವೀಧರ ಕ್ಷೇತ್ರಗಳಿಗೆ ಜೂನ್ 3ರಂದು ನಡೆಯಲಿರುವ ಚುನಾವಣೆ, ಬಿಬಿಎಂಪಿ, ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಸೇರಿದಂತೆ ಮುಂತಾದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಸೂಚಿ ಬಗ್ಗೆ ಚರ್ಚಿಸಲಾಗುವುದು. ಅಂದು ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಡಿಸಿಎಂ ಡಿಕೆಶಿ ಅವರು ತಿಳಿಸಿದರು.