ಬೆಂಗಳೂರು: ರಾಜ್ಯಾದ್ಯಂತ ಸಖತ್‌ ಮಳೆ – ಎಲ್ಲೆಲ್ಲಿ ಎಷ್ಟೆಷ್ಟು?

ಬೆಂಗಳೂರು: ರಾಜ್ಯಾದ್ಯಂತ ಸಖತ್‌ ಮಳೆ – ಎಲ್ಲೆಲ್ಲಿ ಎಷ್ಟೆಷ್ಟು?

ಬೆಂಗಳೂರು: ನಿನ್ನೆ ದೇಶದ ಇತರೆ ರಾಜ್ಯಗಳಲ್ಲಿ 40 ರಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ ಕರ್ನಾಟಕದಲ್ಲಿ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೂರ್ಯನ ಧಗೆ ಕಡಿಮೆಯಾಗಿದ್ದು ಹಾಗೂ ಇಳೆ ತಂಪಾಗಿದೆ. ಮಳೆ ಸುರಿಯುತ್ತಿರುವುದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದೆ. ಇತ್ತ ಮಳೆಯಿಂದಾಗಿ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಶಾಲಾ ಬಾಲಕಿ ಮೃತಪಟ್ಟಿದ್ದರೆ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 

ಮೇ 24ರವರೆಗೆ ಮಳೆ ಸಾಧ್ಯತೆ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಮತ್ತು 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಕರ್ನಾಟಕದ ಕರಾವಳಿ, ಶಿವಮೊಗ್ಗ, ಚಿತ್ರದುರ್ಗ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡದಲ್ಲೂ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ಬೆಂಗಳೂರಿನಲ್ಲಿ ಇಂದು ಕೂಡ ಮಳೆಯಾಗಲಿದ್ದು, ಮೇ 24ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಕಲಬುರಗಿಯಲ್ಲಿ 36.5 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ. 

ಬೆಂಗಳೂರು ಎಲ್ಲೆಲ್ಲಿ ಎಷ್ಟು ಮಳೆ 

ಆಂಜನಾಪುರ-32.50ಮಿ.ಮೀ 

ಗುಟ್ಟಿಗೆರೆ-29-50 ಮಿ.ಮೀ 

ಹೆಮ್ಮಿಗೆಪುರ-24 ಮಿ.ಮೀ 

ಆರ್‌ಆರ್‌ನಗರ-23.50 ಮಿ.ಮೀ 

ಕೆಂಗೇರಿ-21.50ಮಿ.ಮೀ 

ಉತ್ತರಹಳ್ಳಿ-14.40ಮಿ.ಮೀ