ಬೆಂಗಳೂರು: ಒತ್ತುವರಿ ತೆರವು ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ದಂಪತಿ ವಿರುದ್ಧ ಎಫ್ಐಆರ್

ಬೆಂಗಳೂರು: ಒತ್ತುವರಿ ತೆರವು ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ದಂಪತಿ ವಿರುದ್ಧ ಎಫ್ಐಆರ್

ಬೆಂಗಳೂರು: ಬಿಬಿಎಂಪಿ ರಾಜಕಾಲುವೆ ಒತ್ತುವರಿ ಕಾರ್ಯಕ್ಕೆ ಮುಂದಾಗಿದ್ದು, ರಾಜಕಾಲುವೆ ಮೇಲೆ‌ ಮನೆ ಕಟ್ಟಿದವರ ಮನೆ ಕೆಡವಲು ಬಿಬಿಎಂಪಿ ಮುಂದಾಗಿತ್ತು. ಈವೇಳೆ ದಂಪತಿ ತೆರವಿಗೆ ಅಡ್ಡಿಪಡಿಸಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಬಿಬಿಎಂಪಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹಿನ್ನೆಲೆ ದಂಪತಿ ವಿರುದ್ಧ ಕೆ.ಆರ್‌.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಿಬಿಎಂಪಿ ಎಇಇ ಶ್ರೀಲಕ್ಷ್ಮೀ ಎಂಬುವರು ನೀಡಿದ ದೂರಿನ ಮೇರೆಗೆ ಸುನಿಲ್ ಸಿಂಗ್ ಹಾಗೂ ಪತ್ನಿ ಸೋನಾ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 353 - ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, 309 - ಆತ್ಮಹತ್ಯೆ ಯತ್ನ ಹಾಗೂ 506 - ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ರಾಜಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಮುಂದಾದಾಗ ಸುನಿಲ್ ಸಿಂಗ್ ದಂಪತಿ ವಿರೋಧಿಸಿ ಮನೆ ಕಾಂಪೌಂಡ್ ಮೇಲೆ‌ ನಿಂತು ಪೆಟ್ರೋಲ್‌ ಸುರಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದರು. ಕಳೆದ‌ 20 ವರ್ಷಗಳ ಹಿಂದೆ ಮನೆ‌ ಕಟ್ಟಲಾಗಿದ್ದು ಆಗಿಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು ? ಮನೆ ಮೇಲೆ‌ 20 ಲಕ್ಷ ಲೋನ್ ಬಾಕಿಯಿದೆ. ಯಾವುದೇ ಕಾರಣಕ್ಕೂ ಮನೆ ಕೆಡವಲು ಬಿಡುವುದಿಲ್ಲ ಎಂದು‌ ಪಟ್ಟುಹಿಡಿದಿದ್ದರು. ಬಿಬಿಎಂಪಿ ಅಧಿಕಾರಿಗಳು ಹಲವು ಬಾರಿ ಮನವೊಲಿಸಿ ತಿಳುವಳಿಕೆ ಮೂಡಿಸಿದರೂ ಪಟ್ಟು ಬಿಡದಿದ್ದರಿಂದ ಎಇಇ ಲಕ್ಷ್ಮೀ, ದಂಪತಿ ವಿರುದ್ಧ ಕೆ.ಆರ್‌‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದ ದಂಪತಿಯನ್ನು ನೋಟಿಸ್ ನೀಡಿ ಕಳುಹಿಸಿದ್ದಾರೆ.