2023-24ನೇ ಸಾಲಿನ ಬಿಸಿಸಿಐ ಒಪ್ಪಂದ ಪಟ್ಟಿ ಪ್ರಕಟ - ಹಿರಿಯರ ಮಾತಿಗೆ ಮನ್ನಣೆ ಕೊಡದ ಪ್ಲೇಯರ್ಸ್ ಔಟ್

ನವದೆಹಲಿ: 2023-24ನೇ ಸಾಲಿನ ಕೇಂದ್ರಿಯ ಒಪ್ಪಂದ ಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ವಿಶೇಷವೆಂದರೆ ಹಿರಿಯರ ಮಾತಿಗೆ ಮನ್ನಣೆ ಹಾಕದ ಸ್ಟಾರ್ ಬ್ಯಾಟರ್‌ಗಳಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ಗೆ ಕೊಕ್ ನೀಡಲಾಗಿದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಆಟಗಾರರಿಗೆ ಬಿಸಿಸಿಐ ಪ್ರತಿ ವರ್ಷ 12 ತಿಂಗಳ ಒಪ್ಪಂದವನ್ನು ನೀಡುತ್ತದೆ. ಅದರ ಅಡಿಯಲ್ಲಿ ಆಯ್ಕೆಯಾದ ಆಟಗಾರರು ಆ ವರ್ಷದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲಿ ಅಥವಾ ಇಲ್ಲದಿರಲಿ ಅವರು ನಿಗದಿತ ಮೊತ್ತವನ್ನು ಪಡೆಯುತ್ತಾರೆ. ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಎ+ ಗ್ರೇಡ್ ಹೊಂದಿದವರಿಗೆ 7 ಕೋಟಿ, ಎ, ಬಿ ಮತ್ತು ಸಿ ಗ್ರೇಡ್ನಲ್ಲಿರುವವರು ಕ್ರಮವಾಗಿ 5, 3 ಮತ್ತು 1 ಕೋಟಿ ನೀಡಲಾಗುತ್ತದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಭಾರತ ತಂಡದಲ್ಲಿದ್ದ ಇಶಾನ್ ಕಿಶನ್ ಸರಣಿ ಆರಂಭಕ್ಕೂ ಮುನ್ನ ತಮ್ಮ ಹೆಸರನ್ನು ಹಿಂಪಡೆದಿದ್ದರು. ಆ ನಂತರ ಅವರಿಗೆ ರಣಜಿ ಆಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಆ ಕೆಲಸವನ್ನು ಕಿಶನ್ ಮಾಡಲಿಲ್ಲ. ಇನ್ನೊಂದೆಡೆ ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಶ್ರೇಯಸ್ ಅಯ್ಯರ್ ಅವರನ್ನು ಇಂಜುರಿಯಿಂದಾಗಿ ತಂಡದಿಂದ ಹೊರಗಿಡಲಾಗಿತ್ತು. ಚೇತರಿಸಿಕೊಂಡ ಬಳಿಕ ಶ್ರೇಯಸ್ಗೂ ರಣಜಿ ಆಡುವಂತೆ ಹೇಳಲಾಗಿತ್ತು. ಆದರೆ ಅಯ್ಯರ್ ಕೂಡ ಕುಂಟು ನೆಪ ಹೇಳಿ ರಣಜಿ ಆಡುವುದನ್ನು ತಪ್ಪಿಸಿಕೊಂಡಿದ್ದರು. ಇದೀಗ ಅದರ ಭಾರವನ್ನು ಈ ಇಬ್ಬರು ಆಟಗಾರರು ಹೊರಬೇಕಾದ ಸಂದರ್ಭ ಎದುರಾಗಿದೆ.
ಭಾರತ ತಂಡದ ಅನುಭವಿ ಬ್ಯಾಟರ್ ರಿಷಭ್ ಪಂತ್ ಎ ಗ್ರೇಡ್ನಿಂದ ಬಿಗೆ ಹಿಂಬಡ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್ ರಾಹುಲ್ ಮತ್ತು ಶುಭ್ಮನ್ ಗಿಲ್ ಬಿ ಗ್ರೇಡ್ನಿಂದ ಎ ಗ್ರೇಡ್ಗೆ ಬಡ್ತಿ ಪಡೆದಿದ್ದಾರೆ.
ಬಿಸಿಸಿಐ ಒಪ್ಪಂದ ಪಟ್ಟಿ ಹೀಗಿದೆ:
A+ ಗ್ರೇಡ್: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ.
A ಗ್ರೇಡ್: ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ
B ಗ್ರೇಡ್: ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್
C ಗ್ರೇಡ್: ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.