2024-25ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ - 12,369 ಕೋಟಿ ಗಾತ್ರದ ಆಯವ್ಯಯ ಮಂಡಿಸಿದ ವಿಶೇಷ ಆಯುಕ್ತ

2024-25ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ - 12,369 ಕೋಟಿ ಗಾತ್ರದ ಆಯವ್ಯಯ ಮಂಡಿಸಿದ ವಿಶೇಷ ಆಯುಕ್ತ

ಬೆಂಗಳೂರು : 2024-25ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಿದ್ದು, ಬರೋಬ್ಬರಿ 12,369 ಕೋಟಿ ಗಾತ್ರದ ಬಜೆಟ್‌ನ್ನು ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತ ಶಿವಾನಂದ‌ ಕಲ್ಕೆರೆ ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ 1,580 ಕೋಟಿ ಅನುದಾನ ಮೀಸಲು ಇರಿಸಲಾಗಿದೆ. 

ಆದಾಯ ನಿರೀಕ್ಷೆ 12369.50 ಕೋಟಿ ಇದ್ದು, ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಅತಿ ಹೆಚ್ಚು ಹಣ ಮೀಸಲು ಇರಿಸಲಾಗಿದೆ. 6661 ಕೋಟಿ ಹಣ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲು ಇರಿಸಲಾಗಿದೆ. 

ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ 1,580 ಕೋಟಿ ಅನುದಾನ ಮೀಸಲು ಇರಿಸಲಾಗಿದೆ. ಆಸ್ತಿ ತೆರಿಗೆ ಕಾಯ್ದೆ ತಿದ್ದುಪಡಿ ಹಿನ್ನೆಲೆ ಈ ಸಾಲಿನಲ್ಲಿ 15 ಲಕ್ಷ ಜನರಿಗೆ ಸುಮಾರು 2,500 ಕೋಟಿ ಮನ್ನಾ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಬಜೆಟ್‌ನಲ್ಲಿ ಜಾಹೀರಾತು ನಿಯಮ ಜಾರಿ ಘೋಷಿಸಲಾಗಿದ್ದು, 2024-25ನೇ ಸಾಲಿನಲ್ಲಿ ಜಾಹೀರಾತು ಪಾಲಿಸಿ ಜಾರಿ ಮಾಡಿ 500 ಕೋಟಿ ಆದಾಯ ನಿರೀಕ್ಷೆ ಹೊಂದಲಾಗಿದೆ. 

ಬಿಬಿಎಂಪಿ ಬಜೆಟ್‌ನಲ್ಲಿ ಪೌರಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಲಾಗಿದ್ದು, 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿಗೆ ಹಸಿರು ನಿಶಾನೆ ತೋರಿಸಲಾಗಿದೆ. 

ಬಜೆಟ್‌ನಲ್ಲಿ ಮುಖ್ಯ ಅಂಶಗಳು 

ವೈಟ್ ಟಾಪಿಂಗ್ ಗೆ ಸರ್ಕಾರ ಘೋಷಿಸಿದ 900 ಕೋಟಿಯಲ್ಲಿ ಆರಂಭಿಕವಾಗಿ 300 ಕೋಟಿ ಅನುದಾನ ನೀಡಲಾಗಿದೆ. 
ವಿಶ್ವೇಶ್ವರಯ್ಯ ರೈಲ್ವೆಗೆ ಸಂಪರ್ಕ‌ ಕಲ್ಪಿಸುವ ರೋಟರಿ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿ 380 ಕೋಟಿ ಅನುದಾನ ಒದಗಿಸಲಾಗಿದೆ. 

ಬನಶಂಕರಿಯಲ್ಲಿ TOD ಸ್ಕೈ ವಾಕ್ ಗೆ 50 ಕೋಟಿ ನೀಡಲಾಗಿದೆ. 

ಕೆಳಸೇತುವೆ, ಮೇಲ್ಸೇತುವೆ ನಿರ್ವಹಣೆಗೆ 25 ಕೋಟಿ ಮೀಸಲು ಇರಿಸಲಾಗಿದೆ. 

ಪ್ರತಿ ವಾರ್ಡ್‌ಗೆ ಕಾಮಗಾರಿ ನಿರ್ವಹಣೆಗಾಗಿ 75 ಲಕ್ಷ ಅನುದಾನ, ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿ ವಾರ್ಡ್ ಗೆ 1.25 ಕೋಟಿ ಅನುದಾನ ಒದಗಿಸಲಾಗಿದೆ. 225 ವಾರ್ಡ್‌ಗೆ ಅಭಿವೃದ್ಧಿ ಕೆಲಸಗಳಿಗೆ 450 ಕೋಟಿ ಅನುದಾನ ಮೀಸಲು ಇರಿಸಲಾಗಿದೆ. ಲ್ಯಾಂಡ್ ಫಿಲ್ ಭೂಮಿ ಖರೀದಿಗೆ 100 ಕೋಟಿ ಮೀಸಲು ಇರಿಸಲಾಗಿದೆ. 

ಕಳೆದ ಎರಡು ವರ್ಷದಿಂದ She Toilet ಘೋಷಿಸುತ್ತಿರುವ ಪಾಲಿಕೆ, ಈ ಬಾರಿಯೂ ಬಜೆಟ್ ನಲ್ಲಿ ಶಿ ಟಾಯ್ಲೆಟ್ ನಿರ್ಮಿಸಲು 100 ಕೋಟಿ ಅನುದಾನ ಒದಗಿಸಿದೆ. ಬೆಂಗಳೂರು ನಗರದ ತ್ಯಾಜ್ಯ ವಿಲೇವಾರಿಗೆ ಈ ಸಾಲಿನ ಬಜೆಟ್ ನಲ್ಲಿ ಸಾವಿರ ಕೋಟಿ ಮೀಸಲು ಇರಿಸಿ, ತ್ಯಾಜ್ಯ ವಿಲೇವಾರಿ ಸುಗಮಕ್ಕೆ ಹೊಸ 3,673 ಹೊಸ ಪೌರ ಕಾರ್ಮಿಕ ಹುದ್ದೆ ಸ್ಥಾಪನೆಗೆ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ.