ಬೆಂಗಳೂರು: ಒಮಿಕ್ರಾನ್ ಪತ್ತೆ ಹಿನ್ನೆಲೆ; ಬಿಬಿಎಂಪಿ ಮತ್ತೆ ಟಫ್ ರೂಲ್ಸ್

ವರದಿ: ಗಣೇಶ್ ಹೆಗಡೆ ಬೆಂಗಳೂರು: ಒಮಿಕ್ರಾನ್ ಸೋಂಕಿನ ಪ್ರಕರಣ ದ್ವಿಗುಣಗೊಳ್ಳುವ ಆತಂಕ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರನ್ನು ಕಡ್ಡಾಯ ಕ್ವಾರಂಟೈನ್ ಸೇರಿದಂತೆ ಕಠಿಣ ನಿಯಮಗಳ ಜಾರಿಗೆ ಬಿಬಿಎಂಪಿ ಗಂಭೀರ ಚಿಂತನೆ ನಡೆಸಿದೆ. ತಾಂತ್ರಿಕ ಸಲಹಾ ಸಮಿತಿ ತಜ್ಞರು, ಸರ್ಕಾರದ ನಿರ್ದೇಶನದಂತೆ ಹಲವು ಕ್ರಮಗಳಿಗೆ ಪಾಲಿಕೆ ಸಜ್ಜಾಗಿದ್ದು, ಬೆಂಗಳೂರಿನಲ್ಲಿ ಕಡ್ಡಾಯ ಕ್ವಾರಂಟೈನ್ ಸಹಿತ ಅನೇಕ ಅಂಶಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಮುಖವಾಗಿ ವಿದೇಶದಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ. ಒಮಿಕ್ರಾನ್ ಪತ್ತೆಯಾಗಿರುವ ದೇಶಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ. ಪಾಸಿಟಿವ್ ಬಂದ ಪ್ರಯಾಣಿಕರ ಪರೀಕ್ಷೆಯನ್ನು ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಗೆ ರವಾನೆ. ಫಲಿತಾಂಶ ಬರೋವರೆಗೂ ಸಂಪರ್ಕಿತರಿಗೆ ಕ್ವಾರಂಟೈನ್. ಅದೇ ರೀತಿ, ಇಂದಿನಿಂದ ನಗರದಲ್ಲಿ ಲಸಿಕೆಗೆ ಮತ್ತಷ್ಟು ವೇಗ, ಅದರಲ್ಲೂ ಎರಡನೇ ಲಸಿಕೆಗೆ ಚುರುಕು. ರಾಜ್ಯಗಳಿಂದ ನಗರಕ್ಕೆ ಬರುವವರ ಮೇಲೆ ಹದ್ದಿನ ಕಣ್ಣು. ಕೇರಳದಿಂದ ಬರುವವರ ಮೇಲೆ ಹೆಚ್ಚಿನ ನಿಗಾ. ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಹೆಚ್ಚಳ. ಎಲ್ಲೆಲ್ಲಿ ಕೊರೊನಾ ಕ್ಲಸ್ಟರ್ ಕಾಣಿಸಿಕೊಳ್ಳುತ್ತವೋ ಅಲ್ಲಿ ಸ್ಯಾಂಪಲ್ ಸೀಕ್ವೆನ್ಸಿಂಗ್ ಗೆ ಕಳಿಸುವುದು. ಸಾರ್ವಜನಿಕ ಕಾರ್ಯಕ್ರಮಕ್ಕೆ ಕಠಿಣ ನಿರ್ಬಂಧ ವಿಧಿಸುವ ಸಾಧ್ಯತೆ ಅಥವಾ ಭಾಗಿಯಾಗುವ ಜನರ ಸಂಖ್ಯೆಗೆ ಕಡಿವಾಣ ಹಾಕಲು ಕ್ರಮ. ಗುಂಪು ಸೇರುವ ಪ್ರದೇಶಗಳಲ್ಲಿ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರಾಟ್), ರ್‍ಯಾಂಡಮ್ ಟೆಸ್ಟಿಂಗ್ ಹೆಚ್ಚಳ ನಿರ್ದೇಶನಕ್ಕೂ ಬಿಬಿಎಂಪಿ ಮುಂದಾಗಿದೆ.