ಮಾ.28ರಿಂದ SSLC ಪರೀಕ್ಷೆ: ವಿದ್ಯಾರ್ಥಿಗಳಿಗಾಗಿ ಹೆಲ್ಪ್ ಲೈನ್ ಆರಂಭ

ಬೆಂಗಳೂರು: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 28ರಿಂದ ಶುರುವಾಗಲಿದೆ. ಹೀಗಾಗಿ, ಮುಖ್ಯ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಣಿ ಕಾರ್ಯಕ್ರಮವನ್ನ ಎಸ್ಎಸ್ಎಲ್ಸಿ ಬೋರ್ಡ್ ಆಯೋಜಿಸಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸಹಾಯವಾಣಿ ಕೇಂದ್ರಯನ್ನು ಸ್ಥಾಪಿಸಲಾಗಿದೆ. ಈ ಸೇವೆಯು ಮಾರ್ಚ್ 14 ರಿಂದ 27 ರವರೆಗೆ (ರಜಾ ದಿನಗಳನ್ನು ಒಳಗೊಂಡಂತೆ) ಹಾಗೂ ಮಾರ್ಚ್ 28 ರಿಂದ ಏಪ್ರಿಲ್ 11(ಪರೀಕ್ಷಾ ದಿನಗಳಂದು ಮಾತ್ರ) ನಿಯಂತ್ರಣ ಕೊಠಡಿಯಾಗಿ ಕಾರ್ಯನಿರ್ವಹಿಸಲಿದೆ. ಸಹಾಯವಾಣಿಯು ಬೆಳಗ್ಗೆ 9.30 ಗಂಟೆಯಿಂದ ಸೇವಾನಿರತವಾಗಲಿದೆ. ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಮಕ್ಕಳು ಗಳಿಸಬೇಕೆಂದು ಪೋಷಕರು ಆಸೆ ಪಡ್ತಾರೆ. ವಿದ್ಯಾರ್ಥಿಗಳ ಸಾಮರ್ಥ್ಯ, ಬುದ್ಧಿಶಕ್ತಿ, ಆಸಕ್ತಿ, ಕ್ರಿಯಾಶೀಲತೆ, ಕಠಿಣ ಪರಿಶ್ರಮ ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ಅಂಕಗಳನ್ನು ಗಳಿಸಿ ಎಂದು ಅವರ ಮೇಲೆ ಒತ್ತಡವನ್ನು ಪೋಷಕರು/ಶಿಕ್ಷಕರು ಹಾಕುತ್ತಿರುವುದು ಇತ್ತೀಚಿನ ಸಮಸ್ಯೆಯಾಗಿದೆ.