ಪಠ್ಯಪುಸ್ತಕ ಪರಿಷ್ಕರಣೆ | ಕೆಲವು ಪದ ಮತ್ತು ವಾಕ್ಯಗಳಲ್ಲಷ್ಟೇ ಬದಲಾವಣೆ: ಸಚಿವ ಮಧು ಬಂಗಾರಪ್ಪ

ಪಠ್ಯಪುಸ್ತಕ ಪರಿಷ್ಕರಣೆ | ಕೆಲವು ಪದ ಮತ್ತು ವಾಕ್ಯಗಳಲ್ಲಷ್ಟೇ ಬದಲಾವಣೆ: ಸಚಿವ ಮಧು ಬಂಗಾರಪ್ಪ

“ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳು ಯಾವುದೇ ತೊಂದರೆ ಇಲ್ಲದಂತೆ ತೊಡಗಿಸಿಕೊಳ್ಳಲು ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಪಠ್ಯಗಳಲ್ಲಿ ಈ ವರ್ಷ ಯಾವುದೇ ಮುಖ್ಯ ಬದಲಾವಣೆಯಿಲ್ಲ” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಕಳೆದ ವರ್ಷವೇ ಶಾಲಾ ಪಠ್ಯಪುಸ್ತಕ ಪರಿಷ್ಕರಿಸಲಾಗಿದ್ದು, ಈ ಬಾರಿ ಕೆಲವು ಪದ ಹಾಗೂ ವಾಕ್ಯಗಳಲ್ಲಷ್ಟೇ ಬದಲಾವಣೆಯಾಗಿದೆ” ಎಂದು ಹೇಳಿದರು.

“ಪರಿಷ್ಕೃತ ಪಠ್ಯಪುಸ್ತಕಗಳು ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಶೇ 95ರಷ್ಟು ಪಠ್ಯಪುಸ್ತಕಗಳು ಈಗಾಗಲೇ ಶಾಲೆಗಳಿಗೆ ತಲುಪಿವೆ. ಕೋವಿಡ್‌ ನಂತರ ಶಾಲಾ ಮಕ್ಕಳಿಗೆ ಬೈಸಿಕಲ್‌ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಸರ್ಕಾರ ಸಂಪುಟದಲ್ಲಿ ಚರ್ಚಿಸಿ ವಿತರಿಸಲು ನಿರ್ಧರಿಸಲಾಗುವುದು” ಎಂದರು.
“ರಾಜ್ಯದಲ್ಲಿ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಎರಡು ಗ್ರಾಮ ಪಂಚಾಯಿತಿಗೊಂದಂತೆ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಬಾರಿ 600 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುಗುತ್ತಿದೆ. ಶಿಕ್ಷಕರ ನೇಮಕಾತಿಗೂ ಕ್ರಮವಹಿಸಲಾಗಿದೆ” ಎಂದು ಹೇಳಿದರು.

“ಶೂ ವಿತರಿಸಲು ಶಾಲಾಭಿವೃದ್ಧಿ ಸಮಿತಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸಲಾಗುವುದು. ಬಿಬಿಎಂಪಿ ಶಾಲೆಗಳನ್ನು ಇಲಾಖೆ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕವಾಗಿದ್ದು, ಈ ಬಗ್ಗೆ ಜೂನ್ 4ರ ನಂತರ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು” ಎಂದು ತಿಳಿಸಿದರು.