ಜನಾಕ್ರೋಶಕ್ಕೆ ಹೊತ್ತಿ ಉರಿಯುತ್ತಿದೆ ಶ್ರೀಲಂಕಾ; ಎಮರ್ಜೆನ್ಸಿ ಘೋಷಣೆ, ಸೇನಾ ಸುಪರ್ದಿಗೆ ಟಿವಿ ಚಾನಲ್​ಗಳು

ಜನಾಕ್ರೋಶಕ್ಕೆ ಹೊತ್ತಿ ಉರಿಯುತ್ತಿದೆ ಶ್ರೀಲಂಕಾ; ಎಮರ್ಜೆನ್ಸಿ ಘೋಷಣೆ, ಸೇನಾ ಸುಪರ್ದಿಗೆ ಟಿವಿ ಚಾನಲ್​ಗಳು

ಕೊಲಂಬೋ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶಬಿಟ್ಟು ಪರಾರಿಯಾದ ಬೆನ್ನಲ್ಲೇ ಜಾರಿಗೆ ಬರುವಂತೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಪ್ರತಿಭಟನೆ ಕ್ಷಣ ಕ್ಷಣಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತತ್‍ಕ್ಷಣದಿಂದಲೇ ಜಾರಿಗೆ ಬರುವಂತೆ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸದ್ಯ ಶ್ರೀಲಂಕಾದಲ್ಲಿ ಟಿವಿ ವಾಹಿನಿಗಳ ಪ್ರಸಾರ ಬಂದ್​ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಪ್ರತಿಭಟನಾ ಸ್ಥಳದಲ್ಲಿ ಗುಂಡಿನ ಶಬ್ದ ಕೇಳಿಸಿದ್ದು, ಪ್ರಾಣಭಯವನ್ನೂ ಲೆಕ್ಕಿಸದೆ ಜನರು ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ತುರ್ತುಪರಿಸ್ಥಿತಿ ಘೋಷಣೆಯಾಗಿದ್ದರೂ ಸಾವಿರಾರು ಮಂದಿ ಗುಂಪು ಕಟ್ಟಿಕೊಂಡು ಪ್ರತಿಭಟನೆಯಲ್ಲಿ ನಿರತವಾಗಿದ್ದು, ಭದ್ರತಾ ಸಿಬ್ಬಂದಿ ಅಶ್ರವಾಯು ಪ್ರಯೋಗಿಸುತ್ತಿದ್ದಾರೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಲ್ಲು ತೂರಾಟ ಮುಂದುವರಿದಿದೆ. ಕ್ಷಣಕ್ಷಣಕ್ಕೂ ಪರಿಸ್ಥಿತಿ ಉಗ್ರ ಸ್ವರೂಪ ಪಡೆಯುತ್ತಲೇ ಇದ್ದು, ಪ್ರತಿಭಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. 

ಲಂಕಾದ ರಾಜ್ಯಗಳಲ್ಲಿ ಪ್ರತಿಭಟನೆ ನಿಯಂತ್ರಿಸಲು ಆಗಮಿಸಿರುವ ಮಿಲಿಟರಿ ಪಡೆಯು ಮಾಧ್ಯಮ ಕೇಂದ್ರಗಳನ್ನು ತಮ್ಮ ವಶಕ್ಕೆ ಪಡೆದಿದೆ. ಶ್ರೀಲಂಕಾದ ಟಿವಿ, ರೇಡಿಯೋ ಕೇಂದ್ರಗಳನ್ನು ತನ್ನ ಸುಪರ್ದಿಗೆ ಪಡೆದಿರುವ ಲಂಕಾ ಮಿಲಿಟರಿಯು, ದೂರದರ್ಶನ ಪ್ರಸಾರ ಸ್ಥಗಿತ ಮಾಡಿದೆ. ಪ್ರತಿಭಟನೆ-ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಮಾಹಿತಿ-ಕಾರ್ಯಕ್ರಮ ಪ್ರಸಾರ ಮಾಡದಂತೆ ಬಂದ್ ಮಾಡಿದೆ.