ನೆಟ್ ಬೌಲರ್‌ಗೆ ವಿಶೇಷ ಗಿಫ್ಟ್ ನೀಡಿ ಅಚ್ಚರಿ ಮೂಡಿಸಿದ ಶ್ರೇಯಸ್ ಅಯ್ಯರ್

ದುಬೈ: ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ದುಬೈನಲ್ಲಿ ಭಾರತ ತಂಡ ಅಭ್ಯಾಸ ಮಾಡುತ್ತಿದ್ದಾಗ ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಜಸ್ಕಿರನ್ ಎಂಬ ನೆಟ್ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದರು.
ಹೌದು. ಜಸ್ಕಿರನ್ ಸಿಂಗ್ ಎಂಬ ಭಾರತೀಯ ಮೂಲದ ಸ್ಪಿನ್ ಬೌಲರ್ ನೆಟ್ ಬೌಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶದಂತಹ ತಂಡಗಳ ಬ್ಯಾಟಿಗರಿಗೆ ಸ್ಪಿನ್ ಬೌಲಿಂಗ್ ಮಾಡಿ ಅಭ್ಯಾಸಕ್ಕೆ ನೆರವಾಗುತ್ತಿದ್ದರು. ಆದರೆ ಅವರಿಗೆ ಭಾರತೀಯ ಬ್ಯಾಟಿಗರಿಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಯಾಕೆಂದರೆ ರೋಹಿತ್ ಬಳಗ ಈಗಾಗಲೇ ತಮ್ಮ ಅಭ್ಯಾಸಕ್ಕೆ ಸಾಕಷ್ಟು ಆಫ್ ಸ್ಪಿನ್ ಬೌಲರ್ ಗಳನ್ನು ಹೊಂದಿದ್ದರು. ಹೀಗಾಗಿ ಟೀಂ ಇಂಡಿಯಾ ನೆಟ್ ಸೆಷನ್ ವೇಳೆ ಜಸ್ಕಿರನ್ ಸಪ್ಪೆ ಮುಖ ಮಾಡಿಕೊಂಡು ದೂರದಿಂದಲೇ ನೋಡುತ್ತಾ ನಿಂತಿದ್ದರು.
ಇದನ್ನು ಗಮನಿಸಿದ ಶ್ರೇಯಸ್ ಅಯ್ಯರ್, ಆತನ ಬಳಿ ಹೋಗಿ ಆತ್ಮೀಯವಾಗಿ ಉಭಯ ಕುಶಲೋಪರಿ ನಡೆಸಿದ್ದಾರೆ. ಬಳಿಕ ನಿನ್ನ ಶೂ ನಂಬರ್ ಎಷ್ಟು ಎಂದು ಕೇಳಿದ್ದಾರೆ. ಆಗ ಆತ 10 ಎಂದು ಉತ್ತರಿಸಿದ್ದಾನೆ. ತಕ್ಷಣವೇ ಅಯ್ಯರ್ ನಾನು ನಿನಗೆ ಏನೋ ಕೊಡಬೇಕು ಎಂದು ತಮ್ಮ ಬಳಿಯಿದ್ದ ಸ್ಪೋರ್ಟ್ಸ್ ಶೂವನ್ನು ಉಡುಗೊರೆಯಾಗಿ ನೀಡಿದ್ದಾರೆ. ಶ್ರೇಯಸ್ ನಡೆಗೆ ಜಸ್ಕಿರನ್ ಹೃದಯ ತುಂಬಿ ಬಂದಿದ್ದು, ಹೃದಯಪೂರ್ವಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.