ಹೆಚ್ಚುತ್ತಿರುವ ತಾಪಮಾನ : ಕುಡಿಯುವ ನೀರು, ಮೇವು ಲಭ್ಯತೆ ಬಗ್ಗೆ ಜಾಗೃತಿ ಮೂಡಿಸಿ ಎಂದ ಡಿಸಿ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದರ ಬಗ್ಗೆ ಅರಿವು, ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಕುಡಿಯುವ ನೀರು, ಜಾನುವಾರು ಮೇವು, ನರೇಗಾ ಉದ್ಯೋಗ ನೀಡುತ್ತಿರುವ ಬಗ್ಗೆ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಪ್ರಸ್ತುತ ದಿನದವರೆಗೆ ಜಿಲ್ಲೆಯ 37 ಗ್ರಾಮಗಳಿಗೆ 58 ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೋರವೆಲ್, ಪೈಪ್ ಲೈನ್, ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆಯಲು ಒಪ್ಪಂದ ಎಲ್ಲವೂ ಆಗಿದೆ. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ, ಅಪವ್ಯಯ, ಸೋರಿಕೆ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ನವಿಲುತೀರ್ಥ ಜಲಾಶಯದಿಂದ ಎಂ.ಆರ್.ಬಿ.ಸಿ ಕಾಲುವೆ ಮುಖಾಂತರ ಜಿಲ್ಲೆಯ ನವಲಗುಂದ -37, ಅಣ್ಣಿಗೇರಿ-13, ಹುಬ್ಬಳ್ಳಿ-07 ಮತ್ತು ಕುಂದಗೋಳ-01 ಸೇರಿ ಒಟ್ಟು 58 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗಿದ್ದು, ಮೇ ತಿಂಗಳ ಅಂತ್ಯದವರೆಗೆ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುಶಃ ಉಂಟಾಗುವುದಿಲ್ಲ. ಕೆರೆಗಳ ನೀರಿನ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಮೇವು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ 7 ಸ್ಥಳಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದ್ದು, ರೈತರು ಮೇವು ಪಡೆದುಕೊಳ್ಳುತ್ತಿದ್ದಾರೆ. ಮೇ ತಿಂಗಳ ಗಮನದಲ್ಲಿಟ್ಟುಕೊಂಡು ರೈತರಿಂದ ಮೇವು ಬೇಡಿಕೆ ಅಂದಾಜಿಸಿ, ಈಗಲೇ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಿ. ರೈತರು ಪಶುಪಾಲಕರಿಗೆ ಹೆಚ್ಚು ತಾಪಮಾನ ಇರುವ ಈ ಸಂದರ್ಭದಲ್ಲಿ ಜಾನುವಾರು ಪಾಲನೆ ಮತ್ತು ಸುರಕ್ಷತೆ ಬಗ್ಗೆ ತಿಳುವಳಿಕೆ ನೀಡಿ ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದರು.