ಇನ್ಮುಂದೆ ಮಾಹಿತಿ ಹಕ್ಕು ಕಾಯ್ದೆ ಅಡಿ ಪೊಲೀಸ್ ತನಿಖಾ ವರದಿ: ಹೈಕೋರ್ಟ್

ಬೆಂಗಳೂರು: ಯಾವುದೇ ಪ್ರಕರಣದ ತನಿಖೆ ಪೂರ್ಣಗೊಂಡ ನಂತರದ ದಿನಗಳಲ್ಲಿ ಪೊಲೀಸ್ ತನಿಖಾ ವರದಿಯನ್ನು ಇನ್ಮುಂದೆ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದ್ದು, 'ತನಿಖಾ ಹಂತದಲ್ಲಿ ಯಾವುದೇ ಪ್ರಕರಣದ ಮಾಹಿತಿಯನ್ನು ನೀಡಲು ನಿರ್ಬಂಧವಿದೆ. ಆದರೆ, ತನಿಖೆಯು ಪೂರ್ಣಗೊಂಡ ನಂತರವಷ್ಟೇ ಪೊಲೀಸರ ತನಿಖಾ ವರದಿಯ ಪ್ರತಿಯನ್ನು ಮಾಹಿತಿ ಹಕ್ಕು ಕಾಯಿದೆ ಅಡಿ ನೀಡಬಹುದಾಗಿದೆ ಎಂದು ಹೇಳಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯ ಪ್ರತಿಯನ್ನು ಆರ್‌ಟಿಐ ಅಡಿಯಲ್ಲಿ ನೀಡುವಂತೆ ರಾಜ್ಯ ಮಾಹಿತಿ ಹಕ್ಕು ಆಯೋಗ ನೀಡಿದ ಆದೇಶವನ್ನು ಪ್ರಶ್ನಿಸಿ ಅಪರಾಧ ತನಿಖಾ ವಿಭಾಗದ (ಸಿಐಡಿ) ಮಾಹಿತಿ ಹಕ್ಕು ಅಧಿಕಾರಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎನ್.ಎಸ್ ಸಂಜಯ್ ಗೌಡ ನೇತೃತ್ವದ ಏಕ ಸದಸ್ಯ ಪೀಠವು ಮೇಲಿನಂತೆ ಆದೇಶ ಮಾಡಿದೆ.