ಅ. 3ರಿಂದ ಕ್ಲಬ್-ಪಬ್ ಓಪನ್, ನೈಟ್ ಕರ್ಫ್ಯೂ ಸಡಿಲಿಕೆ: ಸಿಎಂ ಹೇಳಿಕೆ

ಅ. 3ರಿಂದ ಕ್ಲಬ್-ಪಬ್ ಓಪನ್, ನೈಟ್ ಕರ್ಫ್ಯೂ ಸಡಿಲಿಕೆ: ಸಿಎಂ ಹೇಳಿಕೆ

ಬೆಂಗಳೂರು: ಶೇ.1ರಷ್ಟು ಕೊರೊನಾ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳ ಸಂಪೂರ್ಣ ಭರ್ತಿಗೆ ಅವಕಾಶ ನೀಡಲಾಗಿದೆ. ಹಾಗೂ ಇಂದಿನಿಂದಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಅವಧಿಯನ್ನು ರಾತ್ರಿ 10 ರಿಂದ ಬೆಳಗ್ಗಿನ ಜಾವ 5 ರವರೆಗೆ ನಿಗದಿಗೊಳಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ತಜ್ಞರ ಜೊತೆಗೆ ಮಹತ್ವದ ಸಭೆ ನಡೆಸಿದ ಸಿಎಂ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಅಕ್ಟೋಬರ್ 3ರಿಂದ ಪಬ್ ಹಾಗೂ ಕ್ಲಬ್ ಗಳಿಗೆ ಅನುಮತಿ ನೀಡಲಾಗುತ್ತದೆ. ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಪಾಸಿಟಿವಿಟಿ ಸರಾಸರಿ ದರ ಶೇ.0.66 ಇದೆ. ಪಾಸಿಟಿವಿಟಿ ದರ ಶೇ.1ಕ್ಕಿಂತ ಜಾಸ್ತಿ ಆದರೆ ಶೇ.50ರಷ್ಟು ಸೀಟು ಭರ್ತಿ ಹಾಗೂ ಶೇ.2ಕ್ಕಿಂತ ಜಾಸ್ತಿಯಾದರೆ ಚಿತ್ರ ಮಂದಿರ ಬಂದ್ ಮಾಡಲಾಗುವುದು. ಇದೇ ಮಾನದಂಡ ಕ್ಲಬ್-ಪಬ್‌ಗಳಿಗೂ ಅನ್ವಯವಾಗಲಿದೆ ಎಂದು ಸಿಎಂ ಹೇಳಿದ್ದಾರೆ. ಕನಿಷ್ಠ 1 ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಥಿಯೇಟರ್ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಗರ್ಭಿಣಿಯರು ಮತ್ತು ಮಕ್ಕಳಿಗೆ ಅವಕಾಶ ನಿರಾಕರಿಸಲಾಗಿದೆ. ಉಳಿದಂತೆ 6ರಿಂದ 12ನೇ ತರಗತಿಯವರೆಗೆ ಶೇ.100ರಷ್ಟು ಹಾಜರಾತಿಗೆ ಅವಕಾಶ ನೀಡಲು ನಿರ್ಧರಿಸಿದ್ದು, ವಾರದಲ್ಲಿ 5 ದಿನ ಅಂದರೆ ಸೋಮವಾರದಿಂದ ಶುಕ್ರವಾರವದರೆಗೆ ಶಾಲಾ-ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಯಿತು.