ಇಂಡಿಯಾ' ಕೂಟದ ಮಹತ್ವದ ಸಭೆಗೆ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಗೈರು!

ಇಂಡಿಯಾ' ಕೂಟದ ಮಹತ್ವದ ಸಭೆಗೆ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಗೈರು!

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟವನ್ನು ಸೋಲಿಸಬೇಕೆಂಬ ಮುಖ್ಯ ಉದ್ದೇಶದಿಂದ ಕಾಂಗ್ರೆಸ್ ನೇತೃತ್ವದ ಸಮಾನ ಮನಸ್ಕ ಪಕ್ಷಗಳ ಒಕ್ಕೂಟ "ಇಂಡಿಯಾ" ದ ಅಧ್ಯಕ್ಷರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿದ್ದು, ಶನಿವಾರ ದೆಹಲಿಯಲ್ಲಿ ನಡೆದ "ಇಂಡಿಯಾ" ಒಕ್ಕೂಟದ ವರ್ಚುವಲ್ ಸಭೆಯ ಬಳಿಕ ಈ ವಿಷಯವನ್ನು ಘೋಷಿಸಲಾಯಿತು. 

ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಇಂಡಿಯಾ ಒಕ್ಕೂಟದ ವರ್ಚುವಲ್ ಸಭೆಗೆ ಬಿಹಾರ ಸಿಎಂ ನಿತೀಶ್ ಕುಮಾರ್, ಪಂಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ಗೈರು ಹಾಜರಿ ಎದ್ದುಕಾಣುವಂತಿತ್ತು. 

ಬಿಜೆಪಿಯನ್ನು ಹೇಗಾದರೂ ಮಾಡಿ ಸೋಲಿಸಲೇಬೆಕೆಂದು ಪಣ ತೊಟ್ಟಿರುವ ಇಪ್ಪತ್ತಾರು ವಿವಿಧ ಪಕ್ಷಗಳ ಪೈಕಿ ನಿನ್ನೆಯ ವರ್ಚುವಲ್ ಸಭೆಯಲ್ಲಿ ಬರೀ ಹದಿನಾಲ್ಕು ಪಕ್ಷಗಳು ಮಾತ್ರ ಪಾಲ್ಗೊಂಡಿದ್ದುದು ಕಂಡು ಬಂತು. ಇನ್ನುಳಿದ ಪಕ್ಷಗಳ ಮುಖಂಡರು ವರ್ಚುವಲ್ ಸಭೆಗೆ ಅಷ್ಟೊಂದು ಮಹತ್ವ ನೀಡದಿರೋದು ಬಹಿರಂಗವಾಗಿದೆ. ಮತ್ತೊಂದೆಡೆ "ಇಂಡಿಯಾ" ವರ್ಚುವಲ್ ಸಭೆಗೆ ಗೈರಾದ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಇನ್ನೂ ಸೀಟು ಹಂಚಿಕೆಯೇ ಅಂತಿಮಗೊಂಡಿಲ್ಲ. ಅದಕ್ಕೂ ಮುನ್ನ‌ ಸಭೆ ಯಾವ ಉದ್ದೇಶಕ್ಕೆ? ಅಂತಾ ಕೇಳುವ ಮೂಲಕ ಅಪಸ್ವರ ಎತ್ತಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಆದರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು ಈ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ. ಇನ್ನು, "ಇಂಡಿಯಾ" ಒಕ್ಕೂಟದ ಸಂಚಾಲಕರಾಗಬೇಕೆಂಬ ಪ್ರಸ್ತಾಪವನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತಿರಸ್ಕರಿಸಿದ ಬೆನ್ನಲ್ಲೇ ಸೋನಿಯಾ ಗಾಂಧಿಯವರು ಮಲ್ಲಿಕಾರ್ಜುನ ಖರ್ಗೆಯವರು "ಇಂಡಿಯಾ" ಒಕ್ಕೂಟದ ಸಾರಥ್ಯವನ್ನು ವಹಿಸಿಕೊಳ್ಳಲು ಸಮರ್ಥ ವ್ಯಕ್ತಿ ಎಂದಾಗ ಹದಿನಾಲ್ಕು ಪಕ್ಷಗಳ ನಾಯಕರು ಹೌದು ಹೌದು ಎಂದು ತಮ್ಮ ಅನುಮೋದಿಸಿದರು. ಅಲ್ಲಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರಿಸಲು ಶಕ್ತಿ ಪಡೆದಂತಾಯಿತು. 

ವರ್ಚುವಲ್ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎನ್.ಸಿ.ಪಿ ಮುಖಂಡ ಶರದ್ ಪವಾರ್, ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು ಎಂದು ದೆಹಲಿಯ ಉನ್ನತ ಮೂಲಗಳು ತಿಳಿಸಿವೆ.