New CJI of India: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯನ್ಯಾಯಮೂರ್ತಿಗಳಾಗಿ ಜಸ್ಟೀಸ್ UU ಲಲಿತ್ ನೇಮಕ

New CJI of India: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯನ್ಯಾಯಮೂರ್ತಿಗಳಾಗಿ ಜಸ್ಟೀಸ್ UU ಲಲಿತ್ ನೇಮಕ

ಹೊಸ ದಿಲ್ಲಿ: ಸುಪ್ರೀಂ ಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ. ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಆಗಿದ್ದಾರೆ.

ಈ ಸಂಬಂಧ ಕಾನೂನು ಹಾಗೂ ನ್ಯಾಯ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರನ್ನು ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.

ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರು ಆಗಸ್ಟ್ 27, 2022ರಂದು ಪ್ರಮಾಣ ವಚನ ಸ್ವೀಕರಿಸಿ ಕಾರ್ಯಾರಂಭ ಮಾಡಲಿದ್ದಾರೆ.

ಆಗಸ್ಟ್ 2014ರಲ್ಲಿ ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕ ಆಗಿದ್ದರು. ಬಾರ್ ಕೌನ್ಸಿಲ್‌ನಿಂದ ನೇರವಾಗಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾದ ಹೆಗ್ಗಳಿಕೆ ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರಿಗೆ ಇದೆ. ಈ ರೀತಿ ಆಯ್ಕೆಯಾದ 2ನೇ ನ್ಯಾಯಾಧೀಶರು ಎಂಬ ದಾಖಲೆಯೂ ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರ ಹೆಸರಿನಲ್ಲಿದೆ. ಜಸ್ಟೀಸ್ ಎಸ್. ಎಂ. ಸಕ್ರಿ ಅವರು ಮೊದಲ ಬಾರಿಗೆ ಬಾರ್ ಕೌನ್ಸಿಲ್‌ನಿಂದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ನೇರವಾಗಿ ಆಯ್ಕೆ ಆಗಿದ್ದರು. ಸಕ್ರಿ ಅವರು ದೇಶದ 13ನೇ ಮುಖ್ಯ ನ್ಯಾಯಮೂರ್ತಿಗಳಾಗಿಯೂ 1971ರಲ್ಲಿ ಕಾರ್ಯ ನಿರ್ವಹಿಸಿದ್ದರು.

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗುವ ಮುನ್ನ ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರು ಸುಪ್ರೀಂ ಕೋರ್ಟ್‌ನ ಕಾನೂನು ಸೇವೆಗಳ ಸಮಿತಿಯಲ್ಲಿ 2 ಅವಧಿಗೆ ಕಾರ್ಯ ನಿರ್ವಹಿಸಿದ್ದರು. ತಮ್ಮ ಕಾರ್ಯಾವಧಿಯಲ್ಲಿ ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರು ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.