ಚಿರತೆ ಕಾರ್ಯಾಚರಣೆ: ಭೌತಿಕ ಬದಲಿಗೆ ಆನಲೈನ್ ಕ್ಲಾಸ್ ಮಾತ್ರ ನಡೆಯುತ್ತವೆ: ಡಿಸಿ

ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಚಿರತೆ ಪತ್ತೆ ಮತ್ತು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿದ್ದು, ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ನಡೆಸುವ ಎಲ್ಲ ಭೌತಿಕ ಕ್ಲಾಸ್ ಗಳನ್ನು ರದ್ದು ಮಾಡಿ, ಇಂದಿನಿಂದ ಆನ್ ಲೈನ್ ಕ್ಲಾಸ್‌ಗಳನ್ನು ಮಾತ್ರ ನಡೆಸಲು ಸೂಚಿಸಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ 1 ರಿಂದ 12 ನೇ ತರಗತಿವರೆಗೆ ಕ್ಲಾಸ್ ನಡೆಯುತ್ತವೆ. ಆದರೆ ಈ ಪ್ರದೇಶದಲ್ಲಿ ಚಿರತೆ ಪತ್ತೆ ಮತ್ತು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಹಾಗೂ ವಿದ್ಯಾರ್ಥಿಗಳ, ಇತರರ ಸುರಕ್ಷತೆ ದೃಷ್ಟಿಯಿಂದ ಸೆ.20 ಭೌತಿಕವಾಗಿ ನಡೆಯುತ್ತಿದ್ದ ಎಲ್ಲ ವರ್ಗಗಳನ್ನು ರದ್ದುಗೊಳಿಸಲಾಗಿದೆ. ಮತ್ತು ಎಲ್ಲ ಶಿಕ್ಷಕರು ಆನ್ ಲೈನ್ ಮೂಲಕ ನಾಳೆಯಿಂದ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಈ ಮಾಹಿತಿಯನ್ನು ರಾಜನಗರ ಕೇಂದ್ರೀಯ ವಿದ್ಯಾಲಯದ ಮುಖ್ಯಸ್ಥರ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಈಗಾಗಲೇ ನೀಡಲಾಗಿದೆ ಎಂದಿದ್ದಾರೆ.