ನಮ್ಮ ಟೆಂಟ್ ಕಿತ್ತರೆ ನಿಮ್ಮ ಕಚೇರಿಗೆ ಬಂದು ಧರಣಿ ಹೂಡುತ್ತೇವೆ: ಟಿಕಾಯತ್ ಎಚ್ಚರಿಕೆ

ನವದೆಹಲಿ: ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನಾ ನಿರತ ರೈತರ ಟೆಂಟ್‌ಗಳನ್ನು ಕಿತ್ತು ಹಾಕುವ ಯತ್ನ ನಡೆದಿದೆ. ಪ್ರತಿಭಟನಾ ಸ್ಥಳದಿಂದ ರೈತರನ್ನು ಚದುರಿಸುವ ಯತ್ನವೂ ನಡೆದಿದೆ. ನಮ್ಮ ಟೆಂಟ್‌ಗಳನ್ನು ತೆರೆಯುವ ಪ್ರಯತ್ನ ಮಾಡಿದರೆ ನಾವು ನೇರವಾಗಿ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಮ್ಯಾಜಿಸ್ಟ್ರೇಟ್ ಕಚೇರಿ ಮುಂದೆ ಬಂದು ಕೂರುತ್ತೇವೆ ಎಂದು ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಎಎನ್ಐ ಮಾಧ್ಯಮ ಸಂಸ್ಥೆಗೆ ಈ ಹೇಳಿಕೆ ನೀಡಿರುವ ಅವರು, "ಜೆಸಿಬಿಗಳ ಸಹಾಯದಿಂದ ಟೆಂಟ್ ಗಳನ್ನು ಆಡಳಿತ ತೆರವುಗೊಳಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ಅವರು ಅದನ್ನು ಮುಂದುವರೆಸಿದಲ್ಲಿ, ರೈತರು ಪೊಲೀಸ್ ಠಾಣೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗಳಲ್ಲೇ ಟೆಂಟ್ ಗಳನ್ನು ಹಾಕಿಕೊಳ್ಳಲಿದ್ದಾರೆ" ಎಂದು ಎಚ್ಚರಿಸಿದ್ದಾರೆ. ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಟಿಕಾಯತ್ ಒತ್ತಾಯಪೂರ್ವಕವಾಗಿ ಟೆಂಟ್ ಗಳನ್ನು ತೆರವುಗೊಳಿಸಲು ಯತ್ನಿಸಿದರೆ ದೇಶಾದ್ಯಂತ ರೈತರು ಸರ್ಕಾರಿ ಕಚೇರಿಗಳನ್ನು ಗಲ್ಲಾ ಮಂಡಿಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿದ್ದಾರೆ ಎಂದು ಬರೆದಿದ್ದರು.