ಹುಬ್ಬಳ್ಳಿ: ವಿವಾದಾತ್ಮಕ ಪೋಸ್ಟ್ ಹಾಕಿದ್ದ ಅಭಿಷೇಕಗೆ ಪಿಯು ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ

ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಆರೋಪಿ ಅಭಿಷೇಕ ಹಿರೇಮಠಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ ನೀಡಿದೆ. ಎಪ್ರಿಲ್ 22ರಿಂದ ಮೇ 16ರವರಗೆ ಪರೀಕ್ಷೆಗೆ ಹಾಜರಾಗಲು ಕೋರ್ಟ್ ಅನುಮತಿ ನೀಡಿದ್ದು, ಹಳೇ ಹುಬ್ಬಳ್ಳಿ ಪೊಲೀಸರ ಬೆಂಗಾವಲು ಭದ್ರತೆ ನೀಡುವಂತೆ ಸೂಚನೆ ನೀಡಲಾಗಿದೆ. ಜೈಲಿನಲ್ಲಿ ಪ್ರತ್ಯೇಕ ಸೇಲ್ ವ್ಯವಸ್ಥೆ ಮಾಡಲಾಗಿದ್ದು, ಓದಲು ಬೇಕಾದ ಪುಸ್ತಕ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಕೋರ್ಟ್ ಆದೇಶ ನೀಡಿದೆ. ಅಭಿಷೇಕ ಪರ ವಕೀಲರು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದರು. ವಕೀಲರಾದ ಸಂಜೀವ್ ಬಡಸ್ಕರ್ ವಾದ ಮಂಡನೆ ಮಾಡಿದ್ದು, ಹುಬ್ಬಳ್ಳಿಯ 4ನೇ ಜೆ.ಎಂ.ಎಫ್.ಸಿ ಕೋರ್ಟ್ ಆದೇಶ ಹೊರಡಿಸಿದೆ.