ಬೆಂಗಳೂರು ಹುಬ್ಬಳ್ಳಿ ಪ್ರಯಾಣಿಕರಿಗೆ ಸಿಹಿ ಸುದ್ದಿ - ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರ ಸಂಖ್ಯೆ ಬಹಳಷ್ಟಿದೆ. ಪ್ಯಾಸೆಂಜರ್ ಟ್ರೈನ್, ಎಕ್ಸ್‌ಪ್ರೆಸ್ ಜೊತೆಗೆ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ಇವೆ. ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಮತ್ತಷ್ಟು ರೈಲುಗಳಿಗೆ ಬೇಡಿಕೆಯಿದೆ.
ಇದೇ ವೇಳೆ ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ಹುಬ್ಬಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಿಸಲು ಮುಂದಾಗಿದೆ. ನೈಋತ್ಯ ರೈಲ್ವೆ ರೈಲು ಸಂಖ್ಯೆ 07339/07340 ಹುಬ್ಬಳ್ಳಿ- ಕ್ರಾಂತಿವೀರಣ್ಣ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲು ನಿಲ್ದಾಣ- ಹುಬ್ಬಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸೇವೆಗಳನ್ನು ವರ್ಷಾಂತ್ಯದವರೆಗೆ ವಿಸ್ತರಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 07339 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಕೆಎಸ್‌ಆರ್ ಬೆಂಗಳೂರು ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷವನ್ನು ಜುಲೈ 1 ರಿಂದ ಡಿಸೆಂಬರ್ 31, 2024 ರವರೆಗೆ ಹುಬ್ಬಳ್ಳಿ ಅಂತ್ಯದವರೆಗೆ ವಿಸ್ತರಿಸಲಾಗಿದೆ.
ಅದೇ ರೀತಿ, ಕ್ರಾಂತಿವೀರಣ್ಣ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (07340) ಸೇವೆಯನ್ನು ಜುಲೈ 2 ರಿಂದ ಜನವರಿ 1, 2025 ರವರೆಗೆ ಬೆಂಗಳೂರಿನ ಅಂತ್ಯದಿಂದ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ಹುಬ್ಬಳ್ಳಿ- ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಆರಂಭದಲ್ಲಿ ಜೂನ್ 30 ರವರೆಗೆ ಮಾತ್ರ ಓಡಿಸಲು ಸೂಚಿಸಲಾಗಿತ್ತು. ಬಳಿಕ ನೈರುತ್ಯ ರೈಲ್ವೆ ರೈಲನ್ನು ಮತ್ತಷ್ಟು ದಿನಕ್ಕೆ ವಿಸ್ತರಿಸಿದೆ.