ಕೋಚ್ ದ್ರಾವಿಡ್ ದಾಖಲೆ ಸರಿಗಟ್ಟಿದ ರನ್ ಮಷಿನ್ ವಿರಾಟ್

ಕೇಪ್ ಟೌನ್: ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ನಡುವಣ ಮೂರು ಟೆಸ್ಟ್‌ಗಳ ಸರಣಿ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಕಾಲಿಟ್ಟಿದೆ. ಅಂತಿಮ ಮತ್ತು ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ಗಳು ಮತ್ತೆ ಕಳಪೆ ಪ್ರದರ್ಶನ ತೋರಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದೊಂದಿಗೆ ದಾಖಲೆಯೊಂದನ್ನು ಬರೆದಿದ್ದಾರೆ. ಕೇಪ್ ಟೌನ್‌ನ ನ್ಯೂಲೆಂಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ಶುರುವಾದ ಮೂರನೇ ಹಾಗೂ ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 223 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿದೆ. ಎರಡನೇ ಟೆಸ್ಟ್ಗೆ ದೂರವಾಗಿದ್ದ ನಾಯಕ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ಗೆ ಮರಳಿದ್ದು, ಈ ಪಂದ್ಯವನ್ನು ಗೆದ್ದು ಐತಿಹಾಸಿಕ ದಾಖಲೆ ಬರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 14 ರನ್ ಕಲೆ ಹಾಕಿದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಹೆಚ್ಚು ರನ್ ಕಲೆ ಹಾಕಿದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಸದ್ಯ ಟೀಂ ಇಂಡಿಯಾ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಹಿಂದಿಕ್ಕಿದರು. ಇನ್ನು ಮೊದಲ ಸ್ಥಾನದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಇದ್ದು, 46.44ರ ಸರಾಸರಿಯಲ್ಲಿ 1,161 ರನ್ ಕಲೆ ಹಾಕಿದ ಸಾಧನೆ ಮಾಡಿದ್ದಾರೆ. ರಾಹುಲ್ ದ್ರಾವಿಡ್ 29.71 ರ ಸರಾಸರಿಯಲ್ಲಿ 624 ರನ್ ಗಳಿಸಿದರು. ಹಾಗಾಗಿ ಈ ದಾಖಲೆಯನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿ ಕೇವಲ 14 ಮಾತ್ರ ಬೇಕಾಗಿತ್ತು. ಈಗ ಕೊಹ್ಲಿ ಈ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.