ಹಾರ್ವರ್ಡ್ ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ನಿಷೇಧ : ಟ್ರಂಪ್ ನಡೆಗೆ ಕೋರ್ಟ್ ತಡೆ

ವಾಷಿಂಗ್ಟನ್ : ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಡುವಿನ ಜಟಾಪಟಿ ತೀವ್ರಗೊಂಡಿದೆ. ಹೌದು ಹಾರ್ವರ್ಡ್ ವಿಶ್ವವಿದ್ಯಾಲಯವು ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯವನ್ನು ರದ್ದುಗೊಳಿಸುವ ಟ್ರಂಪ್ ಆಡಳಿತದ ಕ್ರಮವನ್ನು ಅಮೆರಿಕದ ನ್ಯಾಯಾಧೀಶರು ಶುಕ್ರವಾರ ತಡೆಹಿಡಿದಿದ್ದಾರೆ.
ಹಾರ್ವರ್ಡ್ ದಾಖಲಾತಿ ರದುಗೊಳಿಸುವುದು ಅಮೆರಿಕ ಸಂವಿಧಾನ ಮತ್ತು ಇತರ ಫೆಡರಲ್ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಎಂದು ಕೋರ್ಟ್ ಹೇಳಿದೆ.
ಬೋಸ್ಟನ್ ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ದೂರಿನಲ್ಲಿ, ಹಾರ್ವರ್ಡ್ ದಾಖಲಾತಿ ರದುಗೊಳಿಸುವುದು ಅಮೆರಿಕ ಸಂವಿಧಾನ ಮತ್ತು ಇತರ ಫೆಡರಲ್ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಎಂದು ಕರೆದಿದೆ. ಸರ್ಕಾರದ ಈ ನಿರ್ಧಾರದಿಂದ ವಿಶ್ವವಿದ್ಯಾನಿಲಯ ಮತ್ತು 7,000 ಕ್ಕೂ ಹೆಚ್ಚು ವೀಸಾ ಹೊಂದಿರುವವರ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ ಎಂದು ದೂರುದಾರರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಹಾರ್ವರ್ಡ್ ಪ್ರಸ್ತುತ ತನ್ನ ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್ ಕ್ಯಾಂಪಸ್‌ನಲ್ಲಿ ಸುಮಾರು 6,800 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊಂದಿದೆ. ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಪದವಿ ಅಧ್ಯಯನವನ್ನು ಮಾಡುತ್ತಿದ್ದಾರೆ ಮತ್ತು 100ಕ್ಕೂ ಹೆಚ್ಚು ವಿವಿಧ ದೇಶಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಏನಿದು ಟ್ರಂಪ್ ಹೊಸ ನೀತಿ?
ಇತ್ತೀಚೆಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿ ವೀಸಾ ಹೊಂದಿರುವವರು ನಡೆಸುತ್ತಿರುವ ಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳ ಕುರಿತ ಮಾಹಿತಿಯನ್ನು ಏಪ್ರಿಲ್ 30ರ ಒಳಗಾಗಿ ಸಲ್ಲಿಸುವಂತೆ ಅಮೆರಿಕ ಗೃಹ ಇಲಾಖೆಯು ಈಚೆಗೆ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು. ಹಾಗೇ, ವಿಶ್ವವಿದ್ಯಾಲಯಕ್ಕೆ 2.7 ಮಿಲಿಯನ್ ಡಾಲರ್‌ಗೂ (ಅಂದಾಜು 23 ಕೋಟಿ ರೂ.) ಅನುದಾನ ನೀಡುವುದನ್ನು ಟ್ರಂಪ್ ಸರ್ಕಾರ ರದ್ದು ಮಾಡಿತ್ತು. ಅಮೆರಿಕ ಸರ್ಕಾರ ನೀಡಿದ್ದ ಕೆಲವು ಆದೇಶಗಳನ್ನು ಹಾರ್ವರ್ಡ್ ವಿಶ್ವವಿದ್ಯಾಲಯ ಅನುಸರಿಸದೆ ಇದ್ದುದರಿಂದ ಟ್ರಂಪ್ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ನಿಷೇಧ ಹೇರಿದ್ದರು. ಹಾಗೇ, ಈ ವಿಶ್ವವಿದ್ಯಾಲಯಕ್ಕೆ ನೀಡಿದ ತೆರಿಗೆ ವಿನಾಯಿತಿಯನ್ನು ವಾಪಾಸ್ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದರು. ಇದು ಟ್ರಂಪ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು.