ಬೆಂಗಳೂರು: BMRCLಗೆ ಶೀಘ್ರ 21 ಹೊಸ ಮೆಟ್ರೋ ರೈಲುಗಳ ಸೇರ್ಪಡೆ - ಡಿ.ಕೆ. ಶಿವಕುಮಾರ್‌

ಬೆಂಗಳೂರು: BMRCLಗೆ ಶೀಘ್ರ 21 ಹೊಸ ಮೆಟ್ರೋ ರೈಲುಗಳ ಸೇರ್ಪಡೆ - ಡಿ.ಕೆ. ಶಿವಕುಮಾರ್‌

ಬೆಂಗಳೂರು: ‘ನಮ್ಮ ಮೆಟ್ರೊ’ಗೆ ಶೀಘ್ರದಲ್ಲಿ 21 ರೈಲುಗಳು ಸೇರ್ಪಡೆಯಾಗಲಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. 

ಮೆಟ್ರೊ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರವರೆಗೆ ಬುಧವಾರ ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಶ್ರೀನಿವಾಸಯ್ಯ, ದಾಸರಹಳ್ಳಿ ಶಾಸಕ ಮುನಿರಾಜು ಜೊತೆಗೆ ಪ್ರಾಯೋಗಿಕವಾಗಿ ಸಂಚಾರ ನಡೆಸಿದ ಬಳಿಕ ಅವರು ಮಾತನಾಡಿದರು. 

ಹೊಸ ರೈಲುಗಳಿಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, 1,130 ಕೋಟಿ ರೂ. ವೆಚ್ಚದಲ್ಲಿ ರೈಲುಗಳು ಪೂರೈಕೆಯಾಗಲಿವೆ. ಮೆಟ್ರೋ ರೈಲಿನಲ್ಲಿ ಈಗಿರುವ ವಿಪರೀತ ದಟ್ಟಣೆ ಹೊಸ ರೈಲುಗಳು ಸೇರ್ಪಡೆಗೊಂಡ ಬಳಿಕ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. 

33.46 ಕಿ.ಮೀ. ಹಸಿರು ಮಾರ್ಗ, 40.5 ಕಿ.ಮೀ. ನೇರಳೆ ಮಾರ್ಗ ಸದ್ಯ ಚಾಲನೆಯಲ್ಲಿವೆ. ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಗಳು ನಿರ್ಮಾಣಗೊಳ್ಳುತ್ತಿವೆ. 2026ರ ವೇಳೆಗೆ 175 ಕಿ.ಮೀ. ಉದ್ದದ ಮೆಟ್ರೊ ಮಾರ್ಗಗಳಲ್ಲಿ ರೈಲುಗಳು ಸಂಚರಿಸಲಿವೆ ಎಂದು ಮಾಹಿತಿ ನೀಡಿದರು. 

ಮೆಟ್ರೊ ಒಂದು ಮತ್ತು ಎರಡನೇ ಹಂತ ಪೂರ್ಣಗೊಂಡಿದ್ದು, ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.