ಸವದತ್ತಿ ಯಲ್ಲಮ್ಮ ಸೇರಿ ಬೆಳಗಾವಿ ಜಿಲ್ಲೆಯ 9 ದೇವಸ್ಥಾನಗಳು ಬಂದ್

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕಿಂತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿಗೆ ತಂದಿದೆ. ಈ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಒಂಬತ್ತು ಪ್ರಮುಖ ದೇವಸ್ಥಾನಗಳು ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ, ರಾಮದುರ್ಗದ ವೀರಭದ್ರೇಶ್ವರ, ಹೊಳೆಮ್ಮಾ ದೇವಸ್ಥಾನ ಸೇರಿದಂತೆ ಒಟ್ಟು ಒಂಬತ್ತು ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಲಕ್ಷಾಂತರ ಭಕ್ತರು ಸಮಾವೇಶಗೊಳ್ಳುತ್ತಿದ್ದರು. ಈ ಜಾತ್ರೆಗೆ ಮಹಾರಾಷ್ಟ್ರ ರಾಜ್ಯದಿಂದಲೂ ಸಾವಿರಾರು ಜನರು ಬರಲಿದ್ದಾರೆ. ಇದರಿಂದಾಗಿ ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಸುವುದಕ್ಕೂ ನಿರ್ಬಂಧ ಹೇರಲಾಗಿದ್ದು, ಬೆಳಗಾವಿ ಜಿಲ್ಲೆಯ ಒಂಬತ್ತು ದೇವಸ್ಥಾನಗಳು ಮುಂದಿನ ಆದೇಶದವರೆಗೆ ಬಂದ್ ಆಗಲಿವೆ.