ಶಿರಸಿ: ಉತ್ತರ ಕನ್ನಡ ಜಿಲ್ಲೆ ದೇಶದಲ್ಲೇ ಕಾಳು‌ಮೆಣಸು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ - ಸಂಸದ ಕಾಗೇರಿ

ಶಿರಸಿ: ಉತ್ತರ ಕನ್ನಡ ಜಿಲ್ಲೆ ದೇಶದಲ್ಲೇ ಕಾಳು‌ಮೆಣಸು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ - ಸಂಸದ ಕಾಗೇರಿ

ಶಿರಸಿ: ಕೊಚ್ಚಿಯ ಕಾಳು‌ಮೆಣಸಿನಷ್ಟೇ ಗುಣಮಟ್ಟದ, ಅಧಿಕ ಉತ್ಪಾದನೆಯ ನೆಲೆಯಾದ ಕರ್ನಾಟಕದ ಅದರಲ್ಲೂ ಶಿರಸಿಯ ಕಪ್ಪು ಬಂಗಾರದ ಬೆಲೆಯನ್ನು ಸಾಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಮಂತ್ರಿ ಪಿಯುಷ್ ಗೋಯಲ್ ಅವರಿಗೆ ಸಂಸದ ವಿಶ್ವೇಶ್ವರ ಹೆಗಡೆ‌ ಕಾಗೇರಿ ಹಕ್ಕೊತ್ತಾಯ‌ ಮಾಡಿದರು. 

ದೆಹಲಿಯಲ್ಲಿ ವಾಣಿಜ್ಯ ಸಚಿವರನ್ನು ಮಂಗಳವಾರ ಭೇಟಿ ಮಾಡಿದ ಕಾಗೇರಿ, ಸ್ಪೈಸ್ ಬೋರ್ಡ್ ದರ ಪಟ್ಟಿಯಲ್ಲಿ ಕೇವಲ ಕೊಚ್ಚಿನ್ ಕಪ್ಪುಮೆಣಸು ಎಂದು ಮಾತ್ರ ನಮೂದಿಸಲಾಗುತ್ತಿದೆ. ಆದರೆ, ಕರ್ನಾಟಕವು ವಿಶೇಷವಾಗಿ ಇದರಲ್ಲೂ ಉತ್ತರ ಕನ್ನಡವು ದೇಶದಲ್ಲೇ ಕಾಳು‌ಮೆಣಸು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಈ ಬೆಳೆಯ ಮಾರುಕಟ್ಟೆ ಕೇಂದ್ರ ಸ್ಥಳವಾದ ಶಿರಸಿ ಕಾಳು‌ಮೆಣಸು ಬೆಲೆಯನ್ನು ಕೂಡ ಸಂಬಾರ‌ ಮಂಡಳಿಯ ಅಧಿಕೃತ ದರಪಟ್ಟಿಯಲ್ಲಿ ನಿತ್ಯ ದಾಖಲಿಸಬೇಕು ಎಂದು ಆಗ್ರಹಿಸಿದರು. 

ಈ‌ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು ರೈತರಿಗೆ ಗುಣಮಟ್ಟದ ಬೆಳೆಗೆ‌ ಯೋಗ್ಯ ದರ ಸಿಗುವ ನಿಟ್ಟಿನಲ್ಲಿ‌ ಅಗತ್ಯ‌ಕೈಗೊಳ್ಳುವ ಭರವಸೆ‌ ನೀಡಿದರು. ಈಚೆಗೆ‌ ಶಿರಸಿಯ ಕದಂಬ ಸಂಸ್ಥೆಯಲ್ಲಿ ನಡೆದ ಕಾಳುಮೆಣಸು‌ ಹಬ್ಬದಲ್ಲಿ ಸ್ಪೈಸ್ ಬೋರ್ಡ ದರಪಟ್ಟಿಯಲ್ಲೂ ಶಿರಸಿ‌ ಮೆಣಸಿನ ದರ ದಾಖಲಾಗಬೇಕು ಎಂದು ಆಗ್ರಹ ಕೇಳಿಬಂದಿತ್ತು ಎಂಬುದೂ ಉಲ್ಲೇಖನೀಯ.