ಪ್ರಶ್ನೆ ಪತ್ರಿಕೆ ಸೋರಿಕೆ - ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಸರಕಾರ ಬದ್ಧವಾಗಿದೆ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ಇತ್ತೀಚಿಗೆ ನಡೆದ ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ತನಿಖೆ ನಡೆಸಲು ಹಾಗೂ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಸರಕಾರ ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ಸಂಸತ್ತಿನಲ್ಲಿ ಗುರುವಾರ ಮಾತನಾಡಿದ ಅವರು, ಈ ವಿಷಯ ಪ್ರಸ್ತಾಪಿಸಿದ್ದಾರೆ. ದೇಶದ ಯುವ ಜನರು ದೊಡ್ಡ ಕನಸುಗಳನ್ನು ಕಾಣುವ ಮತ್ತು ಅವರ ಆಕಾಂಕ್ಷೆಗಳನ್ನು ಸಾಧಿಸುವ ವಾತಾವರಣವನ್ನು ಸೃಷ್ಟಿಸುವ ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದರು.
ರಾಷ್ಟ್ರಪತಿಗಳ ಭಾಷಣದ ಮಧ್ಯೆ, ವಿರೋಧ ಪಕ್ಷದ ಸದಸ್ಯರು “ನೀಟ್” ಎಂದು ಕೂಗುತ್ತಿರುವುದು ಕೇಳಿಸಿತು.
“ಯಾವುದೇ ಕಾರಣದಿಂದ ಪರೀಕ್ಷೆಗಳಿಗೆ ಅಡ್ಡಿಯಾದರೆ, ಅದು ಸೂಕ್ತವಲ್ಲ. ಸರ್ಕಾರಿ ನೇಮಕಾತಿಗಳು ಮತ್ತು ಪರೀಕ್ಷೆಗಳಲ್ಲಿ ಪಾವಿತ್ರ್ಯತೆ ಮತ್ತು ಪಾರದರ್ಶಕತೆ ಅತ್ಯಗತ್ಯ” ಎಂದು ಮುರ್ಮು ಪ್ರತಿಪಾದಿಸಿದರು. ನ್ಯಾಯಯುತ ತನಿಖೆ ನಡೆಸಲು ಮತ್ತು ಇತ್ತೀಚಿನ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದವರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.