ಉತ್ತರಾಖಂಡ ಕಾಮನ್ ಸಿವಿಲ್ ಕೋಡ್ ಬಿಲ್‌ಗೆ ರಾಷ್ಟ್ರಪತಿ ಒಪ್ಪಿಗೆ

ಉತ್ತರಾಖಂಡ ಕಾಮನ್ ಸಿವಿಲ್ ಕೋಡ್ ಬಿಲ್‌ಗೆ ರಾಷ್ಟ್ರಪತಿ ಒಪ್ಪಿಗೆ

ನವದೆಹಲಿ : ಫೆಬ್ರವರಿ 7 ರಂದು ಉತ್ತರಾಖಂಡ ಅಸೆಂಬ್ಲಿ ಅಂಗೀಕರಿಸಿದ ಕಾಮನ್ ಸಿವಿಲ್ ಕೋಡ್ (ಯುಸಿಸಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ ಈ ಮಸೂದೆ ಕಾನೂನಾಯಿತು. ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಪಿತ್ರಾರ್ಜಿತ ಕಾನೂನುಗಳನ್ನು ಧರ್ಮದ ಹೊರತಾಗಿ ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಉದ್ದೇಶದಿಂದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಥಾಮಿ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿದ್ದರು. ಮಸೂದೆಯನ್ನು ಅಂಗೀಕರಿಸಲಾಯಿತು. ಈ ಕಾನೂನನ್ನು ಮದುವೆಗಳು, ವಿಚ್ಛೇದನಗಳು, ಉತ್ತರಾಧಿಕಾರ, ಲಿವ್-ಇನ್ ಸಂಬಂಧ ಮತ್ತು ಸಂಬಂಧಿತ ವಿಷಯಗಳನ್ನು ವ್ಯವಹರಿಸಲು ರೂಪಿಸಲಾಗಿದೆ. 

ಇದರ ಪ್ರಕಾರ ಲಿವಿಂಗ್ -ಇನ್ ಸಂಬಂಧವನ್ನು ಸಹ ನೋಂದಾಯಿಸಬೇಕು. ಬಾಲ್ಯ ವಿವಾಹವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಏಕರೂಪದ ನೀತಿ ಜಾರಿಗೆ ಬರಲಿದೆ. ಕಾಯ್ದೆಯು ಎಲ್ಲಾ ಧರ್ಮದ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ಒದಗಿಸುತ್ತದೆ. ಯುಸಿಸಿ ಕಾಯ್ದೆ ಪ್ರಕಾರ ಯುವತಿಯರ ಮದುವೆ ವಯಸ್ಸು 18 ವರ್ಷ ಹಾಗೂ ಯುವಕರ ಮದುವೆ ವಯಸ್ಸು 21 ವರ್ಷ. ಎಲ್ಲಾ ಧರ್ಮದವರಿಗೂ ವಿವಾಹ ನೋಂದಣಿ ಕಡ್ಡಾಯವಾಗಿದೆ. ನೋಂದಣಿ ಮಾಡದಿದ್ದರೆ ಮದುವೆ ಅಮಾನ್ಯವಾಗುತ್ತದೆ. ವಿಚ್ಛೇದನ ಅರ್ಜಿಗಳನ್ನು ಒಂದು ವರ್ಷದ ನಂತರವಷ್ಟೇ ಅನುಮತಿಸಲಾಗುತ್ತದೆ. ಮಾಜಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಒಂಬತ್ತು ಸದಸ್ಯರ ಸಮಿತಿಯು ಯುಸಿಸಿ ಕರಡನ್ನು ರಚಿಸಿತ್ತು.