ಧಾರವಾಡ: ಜೂನ್ 21 ರಂದು ಧಾರವಾಡದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಧಾರವಾಡ: ಜೂನ್ 21 ರಂದು ಧಾರವಾಡದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಧಾರವಾಡ: ನಿತ್ಯ ಮಾಡುವ ಯೋಗ ಅನೇಕ ರೋಗಗಳ ಪರಿಹಾರಕ್ಕೆ ಉತ್ತಮ ಮಾರ್ಗವಾಗಿದೆ. ಯೋಗವನ್ನು ಜೀವನ ಪದ್ಧತಿಯಾಗಿ ಅಳವಡಿಸಿಕೊಳ್ಳುವುದರಿಂದ ಸದೃಢ ದೇಹ ಮತ್ತು ಆರೋಗ್ಯವಂತ ಮನಸ್ಸು ಹೊಂದಲು ಸಾಧ್ಯವಾಗುತ್ತದೆ. ಆಯುಷ ಇಲಾಖೆ ಯೋಗದ ಜನಪ್ರೀಯತೆಗೆ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. 

ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜೂನ್ 21 ರಂದು ಆಯೋಜಿಸಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವ ಸಿದ್ಧತಾ ಸಭೆ ಜರುಗಿಸಿ, ಮಾತನಾಡಿದರು. 

ಪ್ರತಿ ವರ್ಷದಂತೆ ಅಂತರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತದೆ. ಅಂದು ಬೆಳಿಗ್ಗೆ 6:45 ಗಂಟೆಗೆ ಉದ್ಘಾಟನೆ, ಬೆಳಿಗ್ಗೆ 7 ರಿಂದ 8 ಗಂಟೆವರೆಗೆ ಯೋಗ ಪ್ರದರ್ಶನ ಇರುತ್ತದೆ. ಇದರಲ್ಲಿ ಶಾಲಾ ಕಾಲೇಜು ಮಕ್ಕಳು, ವಿದ್ಯಾರ್ಥಿಗಳು ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ವಿವಿಧ ಯೋಗ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. 

ಆಯುಷ್ ಇಲಾಖೆ ಮೂಲಕ ಈ ಕಾರ್ಯಕ್ರಮ ಸಂಘಟಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು, ಸಭಾಪತಿಗಳು ಸೇರಿದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ. 

ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಯೋಗಪಟುಗಳಿಗೆ, ಸಾರ್ವಜನಿಕರಿಗೆ ಕೆಎಂಎಫ್‍ದಿಂದ ಹಾಲು ವಿತರಿಸಲಾಗುತ್ತದೆ. ಕಾರ್ಯಕ್ರಮದ ಯಶಸ್ವಿ ಸಂಘಟಣೆಗೆ ವಿವಿಧ ಇಲಾಖೆಗಳಿಗೆ ಕಾರ್ಯ ಹಂಚಿಕೆ ಮಾಡಲಾಗಿದ್ದು, ಪ್ರತಿ ಇಲಾಖೆ ಅಧಿಕಾರಿಗಳು ಉತ್ತಮವಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. 

ಆಯುಷ್ ಇಲಾಖೆ ಜಿಲ್ಲಾ ಆಯುಷ ಅಧಿಕಾರಿ ಡಾ.ಗಣೇಶ ಕಬಾಡೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಕೆ.ಪಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಆಯುಷ ವೈದ್ಯರು, ಆಯುರ್ವೇದ ಮಹಾವಿದ್ಯಾಲಯ ಪ್ರತಿನಿಧಿಗಳು, ಯೋಗ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.