ಹುಬ್ಬಳ್ಳಿ: ಐಪಿಎಲ್ ಬೆಟ್ಟಿಂಗ್- ಮೂವರು ಅರೆಸ್ಟ್

ಹುಬ್ಬಳ್ಳಿ: ನಗರದ ತಬಿಬ್ ಲ್ಯಾಂಡನ್ ವಾಟರ್ ಟ್ಯಾಂಕ್ ಹತ್ತಿರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನು ಶಹರ ಠಾಣಾ ಪೊಲೀಸರು ಬಂಧಿಸಿ ಅವರಿಂದ 28,000 ರೂ. ವಶಪಡಿಸಿಕೊಂಡಿದ್ದಾರೆ.
ಮಂಟೂರ ರಸ್ತೆಯ ಇಂದ್ರಾ ಕಾಲೋನಿ ನಿವಾಸಿ ದಾವಲಸಾಬ್ ಕಟನಾಲಿ, ಮಂಟೂರ ರಸ್ತೆಯ ನಿವಾಸಿ ಆಯೂಬ್‌ಖಾನ್ ಪಾಟೀಲ್ ಮತ್ತು ಬಂಕಾಪುರ ಚೌಕನ ದೇಸಾಯಿ ಓಣಿ ನಿವಾಸಿ ನಾಗರಾಜ ಜಾಧವ ಬಂಧಿತ ಆರೋಪಿಗಳು. ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ವೇಳೆ ಬೆಟ್ಟಿಂಗ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ಶಹರ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.