ಧಾರವಾಡ : ಗಿಗ್ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ಜೀವ ವಿಮೆ ಯೋಜನೆ ನೋಂದಣಿಗೆ ಸಿಎಂ ಚಾಲನೆ

ಧಾರವಾಡ : ರಾಜ್ಯ ಸರ್ಕಾರದ 2023-24 ನೇ ಸಾಲಿನ ಆಯವ್ಯಯದಲ್ಲಿ ಗಿಗ್ (ಡೆಲಿವರಿ ಕಾರ್ಯ) ಕಾರ್ಮಿಕರಿಗೆ ಘೋಷಿಸಿರುವ ಯೋಜನೆಯ ಫಲಾನುಭವಕ್ಕಾಗಿ ನೋಂದಣಿ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಧಾರವಾಡದಲ್ಲಿ ಚಾಲನೆ ನೀಡಿದರು.
ಗಿಗ್ ಕಾರ್ಮಿಕರೆಂದು ಗುರುತಿಸಿಕೊಳ್ಳುವ ಸ್ವಿಗ್ಗಿ, ಜೊಮ್ಯಾಟೊ, ಅಮೇಜಾನ್, ಪ್ಲಿಪ್‍ಕಾರ್ಟ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿರುವ ಉದ್ಯೋಗಿ (ಕಾರ್ಮಿಕ) ಗಳಿಗೆ 2 ಲಕ್ಷ ರೂಪಾಯಿಗಳ ಅಪಘಾತ ಪರಿಹಾರ ಹಾಗೂ 2 ಲಕ್ಷ ರೂಪಾಯಿಗಳ ಜೀವ ವಿಮಾ ಸೇರಿದಂತೆ ಒಟ್ಟು 4 ಲಕ್ಷ ರೂಪಾಯಿಗಳ ವಿಮಾ ಯೋಜನೆಯನ್ನು ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ನೀಡುವುದಾಗಿ ಪ್ರಸಕ್ತ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದರು.
ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ, ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯ ನೋಂದಣಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಧಾರವಾಡದಲ್ಲಿ ಚಾಲನೆ ನೀಡಿದರು. ರಾಜ್ಯದಲ್ಲಿ ಅಂದಾಜು ಸುಮಾರು 3 ಲಕ್ಷಕ್ಕಿಂತ ಹೆಚ್ಚು ಗಿಗ್ ಕಾರ್ಮಿಕರಿದ್ದು, ಅವರಿಗೆ ಇದರ ಲಾಭ ಸಿಗಲಿದೆ.
ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ತೆರೆಮರೆಯಲ್ಲಿ ಇರುವ ಪತ್ರಿಕಾ ವಿತರಕ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಸರ್ಕಾರವು ಪ್ರಥಮ ಬಾರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯದ ಯೋಜನೆಯನ್ನು ಜಾರಿ ಮಾಡಿದೆ. ರಾಜ್ಯದಲ್ಲಿ ಅಂದಾಜು ಸುಮಾರು 30 ರಿಂದ 40 ಸಾವಿರ ಜನ ಪತ್ರಿಕಾ ವಿತರಣೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಇವರಿಗೆ ರಕ್ಷಣೆ ಹಾಗೂ ಅನುಕೂಲ ನೀಡಲು ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ 2 ಲಕ್ಷ ರೂಪಾಯಿ ಅಪಘಾತ ಪರಿಹಾರ ಮತ್ತು 1 ಲಕ್ಷ ರೂಪಾಯಿ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಪ್ರಕಟಿಸಿದೆ. ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನಾ ನೋಂದಣಿ ಕಾರ್ಯಕ್ರಮಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ಹೆರಿಗೆ ಸೌಲಭ್ಯವಾದ ತಾಯಿ ಲಕ್ಷ್ಮೀ ಬಾಂಡ್, ಅಪಘಾತ, ಮರಣ ಪರಿಹಾರ ಹಾಗೂ ಮದುವೆ ಸಹಾಯಧನ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮದಲ್ಲಿ ಬಾಂಡ್ ಹಾಗೂ ಮಂಜೂರಾತಿ ಆದೇಶಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಿಶೇಷವಾಗಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಾರ್ಮಿಕ ಇಲಾಖೆಯಿಂದ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.