ಸುರಪುರ ವಿಧಾನಸಭೆಗೆ ಉಪ ಚುನಾವಣೆ: ಬಿಜೆಪಿಯಿಂದ ರಾಜುಗೌಡ ಸ್ಪರ್ಧೆ

ಬೆಂಗಳೂರು: ಕಾಂಗ್ರೆಸ್ ಶಾಸಕ ರಾಜ ವೆಂಕಟಪ್ಪ ನಾಯಕ ನಿಧನದ ನಂತರ ತೆರುವಾಗಿದ್ದ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸಿದೆ. ಸುರಪುರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಮಾಜಿ ಶಾಸಕ ರಾಜುಗೌಡ ರಾಜಾ ನರಸಿಂಹ ನಾಯಕ್ ಅವರಿಗೆ ಮತ್ತೆ ಮಣೆ ಹಾಕಿದೆ.
ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ರಾಜಾ ವೆಂಕಟಪ್ಪ ನಾಯಕ್ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಕಾಂಗ್ರೆಸ್ ಅನುಕಂಪದ ಮೇಲೆ ಟಿಕೆಟ್ ಘೋಷಣೆ ಮಾಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜು ಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದರು. ರಾಜುಗೌಡ ಅವರು 88,336 ಮತಗಳನ್ನು ಪಡೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜಾ ವೆಂಕಟ್ಟಪ್ಪ ನಾಯಕ ಅವರು 1,13,559 ಮತಗಳನ್ನು ಪಡೆದುಕೊಂಡು ಜಯ ಗಳಿಸಿದ್ದರು. ಉಳಿದಂತೆ ಜೆಡಿಎಸ್ ಅಭ್ಯರ್ಥಿ ಶ್ರವಣಕುಮಾರ ನಾಯಕ ಅವರಿಗೆ 1544 ಹಾಗೂ ಎಎಪಿ ಪಕ್ಷದ ಮಂಜುನಾಥ ನಾಯಕ ಅವರಿಗೆ 1348 ಮತಗಳು ಲಭಿಸಿತ್ತು. ಇನ್ನು ನೋಟಾಗೆ 1259 ಮತಗಳು ಲಭ್ಯವಾಗಿತ್ತು.