ಖೇಲೋ ಇಂಡಿಯಾದ ಪದಕ ವೀರರಿಗೆ ಭರ್ಜರಿ ಗಿಫ್ಟ್ : ಸರ್ಕಾರಿ ಉದ್ಯೋಗ ಖಾತ್ರಿ - ಅನುರಾಗ್ ಠಾಕೂರ್

ಖೇಲೋ ಇಂಡಿಯಾದ ಪದಕ ವೀರರಿಗೆ ಭರ್ಜರಿ ಗಿಫ್ಟ್ : ಸರ್ಕಾರಿ ಉದ್ಯೋಗ ಖಾತ್ರಿ - ಅನುರಾಗ್ ಠಾಕೂರ್

ನವದೆಹಲಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಖೇಲೋ ಇಂಡಿಯಾದ ಅಥ್ಲೀಟ್‌ಗಳಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಇಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಠಾಕೂರ್, ಇನ್ನು ಮುಂದೆ ಖೇಲೋ ಇಂಡಿಯಾ ಕ್ರೀಡಾಕೂಟದ ಪದಕ ವಿಜೇತರು ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಲಿದ್ದಾರೆ ಎಂಬ ಗುಡ್‌ ನ್ಯೂಸ್ ಕೊಟ್ಟಿದ್ದಾರೆ. 

ವಾಸ್ತವವಾಗಿ 2018 ರಿಂದ ಆರಂಭವಾಗಿರುವ ಖೇಲೋ ಇಂಡಿಯಾ ಗೇಮ್ಸ್‌ನ ಪದಕ ವಿಜೇತ ಕ್ರೀಡಾಪಟುಗಳು ಇದುವರೆಗೆ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರಲಿಲ್ಲ. ಆದರೆ ಇನ್ನು ಮುಂದೆ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಪದಕ ಜಯಿಸುವ ಕ್ರೀಡಾಪಟುಳಿಗೆ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಲಿದ್ದಾರೆ. 

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಠಾಕೂರ್, ‘ ಸಿಬ್ಬಂದಿ, ತರಬೇತಿ ಇಲಾಖೆ ಮತ್ತು ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯದೊಂದಿಗೆ ಚರ್ಚಿಸಿದ ನಂತರ ಸರ್ಕಾರಿ ಉದ್ಯೋಗಗಳ ಮಾನದಂಡಗಳನ್ನು ಬದಲಾಯಿಸಲಾಗಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. 

ಈ ಹಂತವು ಈಗ ಯೂತ್ ಗೇಮ್ಸ್, ಯುನಿವರ್ಸಿಟಿ ಗೇಮ್ಸ್, ಪ್ಯಾರಾ ಗೇಮ್ಸ್ ಮತ್ತು ವಿಂಟರ್ ಗೇಮ್ಸ್ ಸೇರಿದಂತೆ ಖೇಲೋ ಇಂಡಿಯಾದ ಪದಕ ವಿಜೇತರನ್ನು ಸರ್ಕಾರಿ ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡುತ್ತದೆ. ಎಲ್ಲಾ ಖೇಲೋ ಇಂಡಿಯಾ ಸ್ಪರ್ಧೆಗಳಲ್ಲಿ ಪದಕ ವಿಜೇತರು ಈಗ ಪರಿಷ್ಕೃತ ಮಾನದಂಡಗಳ ಪ್ರಕಾರ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ. 

ತಳಮಟ್ಟದಲ್ಲಿ ಪ್ರತಿಭೆಯನ್ನು ಬೆಳೆಸಲು ಮತ್ತು ಕ್ರೀಡೆಯನ್ನು ಆಕರ್ಷಕ ಮತ್ತು ಕಾರ್ಯಸಾಧ್ಯವಾದ ವೃತ್ತಿ ಆಯ್ಕೆಯನ್ನಾಗಿ ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಗೆ ಅನುಗುಣವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ ಈ ಪರಿಷ್ಕೃತ ನಿಯಮಗಳು ಭಾರತವನ್ನು ಕ್ರೀಡಾ ಸೂಪರ್ ಪವರ್ ಮಾಡುವಲ್ಲಿ ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತವೆ’ ಎಂದು ಠಾಕೂರ್ ಬರೆದುಕೊಂಡಿದ್ದಾರೆ.