ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್: ಬಿಜೆಪಿ ಸೇರ್ಪಡೆಯಾದ ಶಾಸಕಿ ನಿರ್ಮಲಾ ಸಾಪ್ರೆ

ಭೋಪಾಲ್ : ಲೋಕಸಭೆ ಚುನಾವಣೆ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಮೂರನೇ ಹಂತದ ಲೋಕಸಭಾ ಚುನಾವಣೆಗೆ ಕೇವಲ ಮೂರು ದಿನಗಳ ಮೊದಲು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಏಕೈಕ ಪಕ್ಷದ ಶಾಸಕಿ ನಿರ್ಮಲಾ ಸಾಪ್ರೆ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.
ಬುಂದೇಲ್‌ಖಂಡ್‌ನಲ್ಲಿ ಪರಿಶಿಷ್ಟ ಜಾತಿ(ಎಸ್‌ಸಿ) ವರ್ಗವನ್ನು ಪ್ರತಿನಿಧಿಸುವ ಸಾಪ್ರೆ, ಬಿನಾ ಅಸೆಂಬ್ಲಿಯಿಂದ ಕಾಂಗ್ರೆಸ್ ಶಾಸಕರಾಗಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಶಾಸಕರಾಗಿದ್ದ ಮಹೇಶ್ ರೈ ಅವರನ್ನು 6000 ಮತಗಳ ಅಂತರದಿಂದ ಸೋಲಿಸಿದ್ದರು. ಸಾಗರ್ ಜಿಲ್ಲೆ ರಹತ್‌ಗಢದ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಸೇರಿದ್ದಾರೆ.
ಬಿಜೆಪಿ ಸೇರಿದ ನಂತರ ಸಾಪ್ರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಪಕ್ಷಕ್ಕೆ ಅಜೆಂಡಾ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಅಭಿವೃದ್ಧಿಯ ಅಜೆಂಡಾ ಇದೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಬಿಜೆಪಿಗೆ ಸೇರಿದ್ದೇನೆ ಎಂದು ಹೇಳಿದ್ದಾರೆ.
ಇಂದೋರ್ ಲೋಕಸಭಾ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಕೇಸರಿ ಪಕ್ಷವನ್ನು ಸೇರಲು ಪಕ್ಷವನ್ನು ತೊರೆದ ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ಗೆ ಇದು ಎರಡನೇ ದೊಡ್ಡ ಹಿನ್ನಡೆಯಾಗಿದೆ. ಮೇ 13 ರಂದು ಚುನಾವಣೆ ನಡೆಯಲಿರುವ ಇಂದೋರ್ ಲೋಕಸಭೆಯಿಂದ ಕಾಂಗ್ರೆಸ್ ಅಕ್ಷಯ್ ಅವರನ್ನು ಕಣಕ್ಕಿಳಿಸಿತು. ಏಪ್ರಿಲ್ 29 ರಂದು ಅವರು ತಮ್ಮ ನಾಮಪತ್ರವನ್ನು ಹಿಂಪಡೆದು ಬಿಜೆಪಿ ಸೇರಿದರು.