ಧಾರವಾಡ: ಬೆಳೆ ಹಾನಿಗೆ ಪರಿಹಾರ ನೀಡುವಂತೆ ರೈತರಿಂದ ಒತ್ತಾಯ

ಧಾರವಾಡ: ಜಿಲ್ಲೆಯಾದ್ಯಂತ ಭಾರಿ ಮಳೆಯಿಂದ ಬೆಳೆ ಹಾನಿಯಾಗಿದೆ ಜೊತೆಗೆ ಜಿಲ್ಲೆಯಾದ್ಯಂತ ಮಳೆಯಿಂದ ಮನೆಗಳು ಕೂಡ ಬಿದ್ದು ಜನರ ಜೀವನ ಅಸ್ತವ್ಯಸ್ತವಾಗಿದೆ ಆದ್ದರಿಂದ ಸರ್ಕಾರ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿ ನವಕರ್ನಾಟಕ ರೈತ ಸಂಘದ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
2020 ನೇ ಇಸ್ವಿಯು ಇಡೀ ವಿಶ್ವಕ್ಕೆ ಒಂದು ಶಾಪವಾಗಿ ಬಂದಿದೆ. ಕೊರೊನಾ ಬಂದು ಜನರು ತಲ್ಲಣಗೊಳ್ಳುವಂತೆ ಮಾಡಿದೆ. ಎಷ್ಟೋ ಜನ ಕೊರೊನಾದಿಂದ ತಮ್ಮ ಕೆಲಸವನ್ನು ಕಳೆದುಕೊಂಡು ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೆ ಪರದಾಡುವಂತೆ ಮಾಡಿದೆ, ಅದರಲ್ಲೂ ಈ ಮಹಾಮಳೆಯ ಹೊಡೆತದಿಂದ ದುಡಿಮೆ ಇಲ್ಲದೇ ಮನೆಯನ್ನು ಕಳೆದುಕೊಂಡವರು ಸಾಕಷ್ಟು ಒದ್ದಾಡುತ್ತಿದ್ದಾರೆ. ಅದೇ ರೀತಿ ಹಳ್ಳಿಯಲ್ಲಿ ರೈತರ ಬಾಳು ಕೂಡಾ ಹಾಳಾಗಿ ಹೋಗಿದೆ.
ಮಳೆಯಿಂದ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡಬೇಕು ಹಾಗೂ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.