ಸುಪ್ರೀಂ ಕೋರ್ಟ್‌ ವಾರ್ನಿಂಗ್ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ 'ಚುನಾವಣಾ ಬಾಂಡ್'ಗಳ ಮಾಹಿತಿ ಕಳುಹಿಸಿದ ಎಸ್‌ಬಿಐ

ಸುಪ್ರೀಂ ಕೋರ್ಟ್‌ ವಾರ್ನಿಂಗ್ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ 'ಚುನಾವಣಾ ಬಾಂಡ್'ಗಳ ಮಾಹಿತಿ ಕಳುಹಿಸಿದ ಎಸ್‌ಬಿಐ

ನವದೆಹಲಿ: ಸುಪ್ರೀಂ ಕೋರ್ಟ್ ನಿನ್ನೆ (ಸೋಮವಾರ) ಮಧ್ಯಾಹ್ನ ನೀಡಿದ್ದ ವಾರ್ನಿಂಗ್ ಬೆನ್ನಲ್ಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದು ಚುನಾವಣಾ ಬಾಂಡ್‌ಗಳ ಬಗ್ಗೆ ಡೇಟಾವನ್ನ ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ ಎಂದು ವರದಿಯಾಗಿದೆ. 

ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾಂಶ ಸಲ್ಲಿಕೆಯ ಗಡುವು ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಜಿಯನ್ನು ಸಲ್ಲಿಸಿತ್ತು. ಈ ಸಂಬಂಧ ಮಾರ್ಚ್ 11ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. 

ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹರಿದು ಬಂದಿರುವ ಅನಾಮಧೇಯ ದೇಣಿಗೆಯ ಕುರಿತ ಮಾಹಿತಿಯನ್ನು ಮಂಗಳವಾರ (ಮಾರ್ಚ್ 12ರ) ಒಳಗಾಗಿ ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌, ಎಸ್‌ಬಿಐಗೆ ನಿನ್ನೆ ಖಡಕ್ ಸೂಚನೆ ನೀಡಿತ್ತು. ಒಂದು ವೇಳೆ ಮಂಗಳವಾರ ಮಾಹಿತಿ ನೀಡಲು ವಿಫಲವಾದರೆ ಎಸ್‌ಬಿಐ ಬ್ಯಾಂಕ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವುದಾಗಿ ಸುಪ್ರೀಂ ಕೋರ್ಟ್‌ ಖಡಕ್ಕಾಗಿ ಎಚ್ಚರಿಕೆ ನೀಡಿತ್ತು. ಇದರಿಂದಾಗಿ ಇಂದು ಎಸ್‌ಬಿಐ ಚುನಾವಣಾ ಬಾಂಡ್‌ಗಳ ಬಗ್ಗೆ ಡೇಟಾವನ್ನ ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ ಎನ್ನಲಾಗಿದೆ. 

ಇನ್ನು ಶುಕ್ರವಾರ (ಮಾರ್ಚ್ 15) ಸಂಜೆ 5 ಗಂಟೆಯೊಳಗೆ ತನ್ನ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಲಾಗಿದೆ. ಈ ಎಲ್ಲ ಬೆಳವಣಿಗೆ ಪರಿಣಾಮ ಎಸ್‌ಬಿಐ ಷೇರುಗಳು ಮಂಗಳವಾರ ಬಿಎಸ್‌ಇಯಲ್ಲಿ 1.82% ನಷ್ಟು ಕುಸಿದು 7593.40 ರೂ.ಗೆ ಕೊನೆಗೊಂಡವು.