ಬ್ರೇಕಿಂಗ್: 6 ದಿನಗಳ ಕಾಲ ನಟ ದರ್ಶನ್ ಅಂಡ್ ಟೀಂ ಪೊಲೀಸ್‌ ಕಸ್ಟಡಿಗೆ

ಬ್ರೇಕಿಂಗ್: 6 ದಿನಗಳ ಕಾಲ ನಟ ದರ್ಶನ್ ಅಂಡ್ ಟೀಂ ಪೊಲೀಸ್‌ ಕಸ್ಟಡಿಗೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್ ಹಾಗೂ ಎಲ್ಲ 13 ಆರೋಪಿಗಳನ್ನು ನ್ಯಾಯಾಲಯವು 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ 13 ಜನರನ್ನು ಪೊಲೀಸರು ಇಂದು ಸಂಜೆ ಬೆಂಗಳೂರಿನ ಮ್ಯಾಜಿಸ್ಟ್ರೀಟ್ ಕೋರ್ಟ್‌ಗೆ ಹಾಜರು ಪಡಿಸಿದರು. ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶರು, ನಿಮ್ಮ ಬಂಧನದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರಾ ಎಂದು ಪ್ರಶ್ನಿಸಿದರು. ಇದಕ್ಕೆ ದರ್ಶನ್, ಹೌದು ನೀಡಿದ್ದರು ಎಂದರು ಉತ್ತರಿಸಿದರು. 

ಈ ವೇಳೆ ತನಿಖಾಧಿಕಾರಿ ದರ್ಶನ್ ಅವರನ್ನು 14 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಬೇಕೆಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಅವರು, ತಮ್ಮ ಕಕ್ಷಿದಾರನನ್ನು ಕಸ್ಟಡಿಗೆ ಒಪ್ಪಿಸುವ ಅಗತ್ಯವಿಲ್ಲವೆಂದು ವಾದಿಸಿದರು. 

ಪ್ರಕರಣದಲ್ಲಿ ದರ್ಶನ್ ವಿರುದ್ಧ ಯಾವುದೇ ಆರೋಪ ಕೇಳಿ ಬಂದಿಲ್ಲ. ಹೀಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ವಕೀಲ ನಾರಾಯಣಸ್ವಾಮಿ ಕೋರ್ಟ್‌ಗೆ ಕೇಳಿಕೊಂಡರು. ಈ ಮಧ್ಯೆ ವಿಚಾರಣೆ ವೇಳೆ ನಟ ದರ್ಶನ್ ಹಾಗೂ ಅವರ ಆಪ್ತೆ ಪವಿತ್ರಾ ಗೌಡ ಕಣ್ಣೀರು ಹಾಕಿದರು. 

ಕೊನೆಗೆ ವಾದ-ಪ್ರತಿವಾದ ಆಲಿಸಿದ ಕೋರ್ಟ್‌ 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.